ತಾಯಿಯ ದುಃಖದಲ್ಲಿ ಅಲೆದಾಡುತ್ತಿರುವ 1 ವರ್ಷದ ಮರಿಯಾನೆ
ಮಡಿಕೇರಿ: ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ಕಂಗಾಲಾಗಿರುವ ಒಂದು ವರ್ಷದ ಮರಿಯಾನೆ ವಿರಾಜಪೇಟೆ ತಾಲೂಕಿನ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದೆ. ಅಮ್ಮತ್ತಿ ಸಮೀಪದ ಆನಂದಪುರ–ಪುಲಿಯೇರಿ ಗ್ರಾಮದ ಕಾಫಿ ತೋಟದಿಂದ ತಪ್ಪಿಸಿಕೊಂಡ ಮರಿಯಾನೆ, ಕಾರ್ಯಾಚರಣೆ ತಂಡವನ್ನು ದಿಕ್ಕುತಪ್ಪಿಸಿ ಸುಮಾರು 10 ಕಿ.ಮೀ. ದೂರದವರೆಗೆ ಸಂಚರಿಸಿದೆ.
ಶನಿವಾರ ಆನಂದಪುರ–ಪುಲಿಯೇರಿ ಗ್ರಾಮದ ಕಾಫಿ ತೋಟದಲ್ಲಿ ಹೆಣ್ಣಾನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ತಾಯಿಯ ಮೃತದೇಹದ ಬಳಿ ನಿಂತು ಮರಿಯಾನೆ ನಿರಂತರವಾಗಿ ಚೀರಾಡುತ್ತಾ ಯಾರನ್ನೂ ಸಮೀಪಕ್ಕೆ ಬಿಡದೆ ಮರಣೋತ್ತರ ಪರೀಕ್ಷೆಗೆ ಅಡ್ಡಿಪಡಿಸಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬಲೆ ಹಾಕಿ ಮರಿಯಾನೆಯನ್ನು ಸೆರೆಹಿಡಿದು ಸಮೀಪದ ಮನೆಯೊಂದರಲ್ಲಿ ಹಗ್ಗದಿಂದ ಕಟ್ಟಿಹಾಕಿದ್ದರು. ಆದರೆ ಸ್ಥಳಾಂತರಿಸುವ ವೇಳೆ ಹಗ್ಗ ಕಳಚಿಕೊಂಡ ಮರಿಯಾನೆ ಮೂವರು ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ಕಾಫಿ ತೋಟದೊಳಗೆ ಓಡಿ ತಪ್ಪಿಸಿಕೊಂಡಿತು.
ದಾಳಿಯಲ್ಲಿ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತೊಬ್ಬ ಸಿಬ್ಬಂದಿ ಗದ್ದೆಗೆ ಬಿದ್ದು ಕಾಲಿಗೆ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ತಡವರೆಗೂ ಹುಡುಕಾಟ ನಡೆಸಿದರೂ ಮರಿಯಾನೆ ಪತ್ತೆಯಾಗಲಿಲ್ಲ. ಇಂದು ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವರಾಂ ನೇತೃತ್ವದಲ್ಲಿ ಸುಮಾರು 40 ಮಂದಿ ಸಿಬ್ಬಂದಿ ಮತ್ತೊಮ್ಮೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಮರಿಯಾನೆ ಸುಮಾರು 10 ಕಿ.ಮೀ. ದೂರದ ತಿತಿಮತಿ ವಲಯದ ಚೆನ್ನಯ್ಯನಕೋಟೆ ವ್ಯಾಪ್ತಿಯಲ್ಲಿ ಕಾಣಿಸಿಕೊಂಡರೂ, ತಂಡ ಅಲ್ಲಿಗೆ ತಲುಪುವಷ್ಟರಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಮೇಕೂರು–ಹೊಸ್ಕೇರಿ ಭಾಗದತ್ತ ತೆರಳಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮರಿಯಾನೆಯ ಚಲನವಲನದ ಮೇಲೆ ನಿಗಾ ವಹಿಸಲು ಅರಣ್ಯ ಇಲಾಖೆ ರಾತ್ರಿ ಪಾಳಿಯಲ್ಲೂ ಸಿಬ್ಬಂದಿಯನ್ನು ನಿಯೋಜಿಸಿದ್ದು, ಸುರಕ್ಷಿತವಾಗಿ ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ. ತಾಯಿಯನ್ನು ಕಳೆದುಕೊಂಡ ನೋವಿನಿಂದ ಆತಂಕಗೊಂಡಿರುವ ಮರಿಯಾನೆ ತನ್ನ ತಾಯಿಯನ್ನು ಹುಡುಕುತ್ತಾ ಅಲೆದಾಡುತ್ತಿದ್ದು, ತನ್ನನ್ನು ಹಿಡಿಯಲು ಮುಂದಾಗುವ ಸಿಬ್ಬಂದಿಗಳ ಮೇಲೆ ಆಕ್ರಮಣಕಾರಿ ವರ್ತನೆ ತೋರುತ್ತಿರುವುದು ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
2
Wow
0
