ಎರಡು ರಾಜ್ಯಗಳಲ್ಲಿ 13 ಗಂಟೆಗಳ ಆಪರೇಷನ್: ₹16 ಕೋಟಿ ದುರುಪಯೋಗ ಮಾಡಿದ ಬ್ಯಾಂಕರ್ ಹಿತೇಶ್ ಸಿಂಗ್ಲಾ ಬಂಧನ

Sep 21, 2025 - 09:44
Sep 21, 2025 - 09:44
 0  202
ಎರಡು ರಾಜ್ಯಗಳಲ್ಲಿ 13 ಗಂಟೆಗಳ ಆಪರೇಷನ್: ₹16 ಕೋಟಿ ದುರುಪಯೋಗ ಮಾಡಿದ ಬ್ಯಾಂಕರ್ ಹಿತೇಶ್ ಸಿಂಗ್ಲಾ ಬಂಧನ
Photo credit: Times of India

ಮುಂಬೈ: ಬ್ಯಾಂಕ್ ಆಫ್ ಇಂಡಿಯಾದ ಅಮಾನತುಗೊಂಡ ಅಧಿಕಾರಿ ಹಿತೇಶ್ ಸಿಂಗ್ಲಾ ನನ್ನು ಜಾರಿ ನಿರ್ದೇಶನಾಲಯ (ಈಡಿ) ದೀರ್ಘ ಶೋಧ ಕಾರ್ಯಾಚರಣೆ ಬಳಿಕ ಬಂಧಿಸಿದೆ. ಹಿರಿಯ ನಾಗರಿಕರು, ಅಪ್ರಾಪ್ತ ವಯಸ್ಕರು, ಮೃತ ಗ್ರಾಹಕರು ಹಾಗೂ ದೀರ್ಘಕಾಲ ನಿಷ್ಕ್ರಿಯವಾಗಿದ್ದ 127 ಖಾತೆಗಳಿಂದ ಒಟ್ಟು ₹16.10 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪ ಸಿಂಗ್ಲಾ ವಿರುದ್ಧ ದಾಖಲಾಗಿದೆ.

ಸಿಂಗ್ಲಾ ವಂಚನೆ ಬೆಳಕಿಗೆ ಬಂದ ತಕ್ಷಣ ತಲೆಮರೆಸಿಕೊಂಡಿದ್ದ. ಆದರೆ ಮಂಗಳವಾರ ರಾತ್ರಿ ಉಜ್ಜಯಿನಿ–ವೆರಾವಲ್ ಮಾರ್ಗದ ಮಹಾಮನಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾನೆಂಬ ಗುಪ್ತಚರ ಮಾಹಿತಿ ಆಧಾರವಾಗಿ ಈಡಿ ಅಧಿಕಾರಿಗಳು ನಿಖರ ಕಾರ್ಯಚರಣೆ ಕೈಗೊಂಡರು. ಆತ ಸ್ಲೀಪರ್ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿದ್ದರೂ, ಕಣ್ಗಾವಲು ತಪ್ಪಿಸಲು ಮಧ್ಯದಲ್ಲಿ ಎಸಿ ಕೋಚ್‌ಗೆ ಬದಲಾಯಿಸಿಕೊಂಡು, ನಿರಂತರವಾಗಿ ಆಸನ ಮತ್ತು ಬೋಗಿಗಳನ್ನು ಬದಲಾಯಿಸುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಸುಮಾರು 13 ಗಂಟೆಗಳ ಕಾರ್ಯಾಚರಣೆಯ ಬಳಿಕ, ರೈಲು ಅಹಮದಾಬಾದ್ ತಲುಪುವ ಹೊತ್ತಿಗೆ ರೈಲ್ವೆ ಸಿಬ್ಬಂದಿಯ ಸಹಕಾರದಿಂದ ಆತನನ್ನು ಬಂಧಿಸಲಾಯಿತು.

 ತನಿಖೆಯ ಪ್ರಕಾರ, ಸಿಂಗ್ಲಾ ಮೇ 2023ರಿಂದ ಜುಲೈ 2025ರವರೆಗೆ ಬ್ಯಾಂಕ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದ. ಅನುಮತಿಯಿಲ್ಲದೆ ಸ್ಥಿರ ಠೇವಣಿಗಳು, ಪಿಪಿಎಫ್ ಖಾತೆಗಳು, ಹಿರಿಯ ನಾಗರಿಕರ ಉಳಿತಾಯ ಖಾತೆಗಳು ಮತ್ತು ದೀರ್ಘಕಾಲ ನಿಷ್ಕ್ರಿಯವಾಗಿದ್ದ ಖಾತೆಗಳನ್ನು ಮುಚ್ಚಿ ಹಣವನ್ನು ವಾಪಸ್ ಪಡೆಯುತ್ತಿದ್ದ.

ಆ ಹಣವನ್ನು ನಂತರ ಸಣ್ಣ ಕಂತುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿನ ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸುತ್ತಿದ್ದ. ಪರಿಶೀಲನೆಗೆ ಒಳಗಾಗುವ ಸಾಧ್ಯತೆ ಕಡಿಮೆ ಇರುವ ಖಾತೆಗಳನ್ನು ಮಾತ್ರ ಗುರಿಯಾಗಿಸಿಕೊಂಡ ಕಾರಣ, ಈ ವಂಚನೆ ದೀರ್ಘಕಾಲ ಯಾರಿಗೂ ತಿಳಿಯದೆ ಮುಂದುವರಿಯಿತು.

2025ರ ಆಗಸ್ಟ್ 6ರಂದು ಬ್ಯಾಂಕ್ ಆಫ್ ಇಂಡಿಯಾದ ಉಪ ವಲಯ ವ್ಯವಸ್ಥಾಪಕ ಓಂ ಪ್ರಕಾಶ್ ಅವರು ನೀಡಿದ ದೂರಿನ ಮೇರೆಗೆ, ಸಿಬಿಐ ಭ್ರಷ್ಟಾಚಾರ ನಿಗ್ರಹ ಶಾಖೆ ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಿಂಗ್ಲಾ ಮತ್ತು ಆತನ ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಿತು. ಬಳಿಕ ಪ್ರಕರಣವನ್ನು ಈಡಿ ತನಿಖೆಗೆ ಹಸ್ತಾಂತರಿಸಲಾಯಿತು.

 ವಂಚಿಸಿದ ಹಣದ ಒಂದು ಭಾಗವನ್ನು ಸಿಂಗ್ಲಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದುರುಪಯೋಗಗೊಂಡ ಮೊತ್ತವನ್ನು ಪತ್ತೆಹಚ್ಚಿ ವಾಪಸ್ ಪಡೆಯಲು ಈಡಿ ಕಾರ್ಯಾಚರಣೆ ಮುಂದುವರಿಸಿದೆ. ಜೊತೆಗೆ, ಆತನ ಸಹಚರರ ಮನೆ, ಕಚೇರಿಗಳ ಮೇಲೂ ಶೋಧ ಕಾರ್ಯಾಚರಣೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ.

 ಬಂಧನದ ನಂತರ ಸಿಂಗ್ಲಾನನ್ನು ಮುಂಬೈನ ಹಣ ವರ್ಗಾವಣೆ ತಡೆ ಕಾಯ್ದೆ (PMLA) ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಮಂಗಳವಾರದವರೆಗೆ ಈಡಿ ಕಸ್ಟಡಿಗೆ ಒಪ್ಪಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0