ಗಾಂಧಿ ಜಯಂತಿ ಪ್ರಯುಕ್ತ ಶ್ರೀ ವನಭದ್ರಕಾಳಿ ಸಂಘದಿಂದ 15 ಕಿ.ಮೀ. ಸ್ವಚ್ಛತಾ ಕಾರ್ಯ
admincoorgdaily

ಗೋಣಿಕೊಪ್ಪಲು : ಗಾಂಧಿ ಜಯಂತಿಯ ಪ್ರಯುಕ್ತ ಶ್ರೀ ವನಭದ್ರಕಾಳಿ ಸಂಘ, ಹಾತೂರು, ಕೊಳತೋಡು, ಬೈಗೋಡು ಇವರ ವತಿಯಿಂದ ಹಾತೂರು, ಕೈಕೇರಿ ಸರಹದ್ದಿನಿಂದ ಕೊಳತೋಡು ವರೆಗೆ, ಹಾತೂರಿನಿಂದ ಬೈಗೋಡು ವರೆಗೆ 1 ಕಿ.ಮೀ. ಹಾಗೂ ಹಾತೂರಿನಿಂದ ಕುಂದ ರಸ್ತೆಯಲ್ಲಿ 1 ಕಿ.ಮೀ. ಸೇರಿದಂತೆ ಒಟ್ಟು ಸುಮಾರು 15 ಕಿ.ಮೀ. ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೇಳಪಂಡ ಬಾಬು ಉತ್ತಪ್ಪ
ಮಾತನಾಡಿ, ನಮ್ಮ ಸಂಘವು ಕಳೆದ 7 ವರ್ಷಗಳಿಂದ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಗಾಂಧಿ ಜಯಂತಿಯ ದಿನದಂದು ಕೈಕೇರಿ ಗಡಿಯಿಂದ ಕೊಳತೋಡು ತನಕ ಪ್ರತಿವರ್ಷ ರಸ್ತೆಯ ಎರಡೂ ಬದಿಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ಅಲ್ಲದೆ ಕ್ರೀಡೆಗಳಿಗೆ ಸಹಕಾರ ನೀಡುತ್ತಾ ಬಂದಿದ್ದು, ಸ್ವಾತಂತ್ರ್ಯ ದಿನದಂದು ಶಾಲಾ ಮಕ್ಕಳಿಗೆ ಸಿಹಿ ವಿತರಿಸುತ್ತಿದ್ದೇವೆ ಎಂದರು.
ಸಮಾಜ ಸೇವಕ ಪುಲಿಯಂಡ ರೋಷನ್ ಕಾಳಪ್ಪ ಮಾತನಾಡಿ, ಸ್ವಚ್ಛತಾ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಪ್ರವಾಸಿಗರು ತಮ್ಮ ವಾಹನಗಳಲ್ಲಿ ಓಡಾಡುವ ಸಂದರ್ಭದಲ್ಲಿ ತ್ಯಾಜ್ಯಗಳನ್ನು ರಸ್ತೆ ಬದಿಗೆ ಹಾಕದೆ ಸಹಕರಿಸಬೇಕು. ಕರ್ನಾಟಕದ ಕಾಶ್ಮೀರ ಎಂಬ ಹೆಸರು ಪಡೆದಿರುವ ಕೊಡಗು ಜಿಲ್ಲೆ ಇಂದು ಕಸದ ತೊಟ್ಟಿಯಂತಾಗುತ್ತಿರುವುದು ಬೇಸರದ ಸಂಗತಿ. ಸುಂದರ ಕೊಡಗಿನ ಸ್ವಚ್ಛತೆಗೆ ಎಲ್ಲರೂ ಕೈಜೋಡಿಸಬೇಕು. ತೋಟದ ಮಾಲೀಕರು ತಮ್ಮ ತೋಟದ ಬದಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ ಸಹಕರಿಸಬೇಕು. ಇಲ್ಲದಿದ್ದರೆ ಕಾಡು ಬೆಳೆದ ಸ್ಥಳದಲ್ಲಿ ಕಸ ಎಸೆಯುತ್ತಾರೆ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯನಿಮಿತ್ತ ಅದೇ ರಸ್ತೆ ಮಾರ್ಗವಾಗಿ ಬರುತ್ತಿದ್ದ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ಸ್ವಚ್ಛತಾ ಸ್ಥಳದಲ್ಲಿ ತಮ್ಮ ವಾಹನ ನಿಲ್ಲಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ವಾಹನಗಳಲ್ಲಿ ಸಂಚರಿಸುವ ಸಾರ್ವಜನಿಕರು ಎಲ್ಲೆಂದರಲ್ಲಿ ಕಸವನ್ನು ಎಸೆಯುತ್ತಿರುವುದರಿಂದ ಅದನ್ನು ಸ್ವಚ್ಛಗೊಳಿಸುವ ಪರಿಸ್ಥಿತಿ ಬಂದಿರುವುದು ಬೇಸರದ ಸಂಗತಿ. ಸಾರ್ವಜನಿಕರು ಈ ಬಗ್ಗೆ ಅರಿವು ಪಡೆದು ರಸ್ತೆ ಬದಿಯಲ್ಲಿ ಕಸ ಹಾಕದೆ, ಕೊಡಗನ್ನು ಸ್ವಚ್ಛವಾಗಿಡಲು ಸಹಕರಿಸಬೇಕು. ಶ್ರೀ ವನಭದ್ರಕಾಳಿ ಸಂಘದ ಮೂಲಕ ಹಾತೂರು, ಬೈಗೋಡು, ಕೊಳತೋಡು, ಕುಂದ, ಕೈಕೇರಿ ಗ್ರಾಮಸ್ಥರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೊಕ್ಕಂಡ ಧೀರಜ್, ಸೋಮೆಯಂಡ ರಂಜಿತ್, ಕೇಳಪಂಡ ಸುಜಾ ನಾಣಯ್ಯ, ಪುಲಿಯಂಡ ದಿನೇಶ್, ಮುಕ್ಕಾಟೀರ ಸೋಮಣ್ಣ, ಮುಕ್ಕಾಟೀರ ವಸಂತ, ಕಾಳೇಂಗಡ ಮುತ್ತಪ್ಪ ಮತ್ತಿತರರು ಹಾಜರಿದ್ದರು.