ಅ.17ರಂದು ಕುಶಾಲನಗರಕ್ಕೆ ಮೈಸೂರು ದಸರಾ ಕಂಬಳದ 150 ಜೊತೆ ಕೋಣಗಳು: ಪುರಸಭೆಯಲ್ಲಿ ಪೂರ್ವಭಾವಿ ಸಭೆ
admincoorgdaily

ಕುಶಾಲನಗರ: ಮೈಸೂರು ದಸರಾ ಅಂಗವಾಗಿ ನಡೆಯಲಿರುವ ಕಂಬಳದ ನಿಮಿತ್ತ ಆಗಮಿಸಲಿರುವ ಕೋಣಗಳ ಸ್ವಾಗತ ಹಾಗೂ ವ್ಯವಸ್ಥೆ ಕುರಿತು ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಮಾತನಾಡಿ, "ಕಂಬಳ ಒಂದು ಕಾಲದಲ್ಲಿ ಕಾನೂನುಬಾಹಿರವಾಗಿ ಇತ್ತು. 2017-18ರಲ್ಲಿ ಸರ್ಕಾರ ತಿದ್ದುಪಡಿ ತಂದು ಕಂಬಳಕ್ಕೆ ಮತ್ತೆ ಕಾನೂನುಬದ್ಧ ಮಾನ್ಯತೆ ನೀಡಿತು. ನಾನು ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಭಾಗವಹಿಸಿದ್ದೆ. ಅಲ್ಲಿಂದ ನೋಡಿದರೆ ಗೊತ್ತಾಗುತ್ತದೆ, ಈ ಜನ ಕೋಣಗಳನ್ನು ಎಷ್ಟು ಪ್ರೀತಿಸುತ್ತಾರೆ ಅಂತ. ತಮ್ಮ ಮಕ್ಕಳಂತೆ ಸಾಕುತ್ತಾರೆ. ಕೋಟಿ ರೂಪಾಯಿ ಕೊಟ್ಟರೂ ಆ ಪ್ರೀತಿಯನ್ನು ಬಿಡಲ್ಲ, ಅದು ಒಂದು ಹುಚ್ಚು" ಎಂದರು.
"ಮೈಸೂರು ದಸರಾ ಕಂಬಳದಲ್ಲಿ ಸುಮಾರು 150 ರಿಂದ 160 ಜೊತೆ ಕೋಣಗಳು ಭಾಗವಹಿಸಲಿವೆ. ಅದರ ಅಂಗವಾಗಿ ಅ.17ರಂದು ಮಧ್ಯಾಹ್ನ 1.30ರ ಒಳಗೆ ಸುಮಾರು 150 ಜೊತೆ ಕೋಣಗಳು ಕುಶಾಲನಗರಕ್ಕೆ ಆಗಮಿಸಲಿವೆ.
ಮಡಿಕೇರಿಯಲ್ಲಿ ಬಂಟರ ಸಂಘ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು ಸಾಂಕೇತಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಿವೆ. ಇಲ್ಲಿ ನೆರಳಿನ ವ್ಯವಸ್ಥೆ, ಶಾಮಿಯಾನ, ನೀರು, ಹುಲ್ಲು ಎಲ್ಲವನ್ನು ನಾವು ಸ್ಥಳೀಯವಾಗಿ ನೋಡಿಕೊಳ್ಳುತ್ತೇವೆ. ಎಲ್ಲರೂ ಇದನ್ನು ಟೀಮ್ ವರ್ಕ್ ಆಗಿ ತೆಗೆದುಕೊಂಡು ಸಹಕಾರ ನೀಡಬೇಕು" ಎಂದು ಮನವಿ ಮಾಡಿದರು.
ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ ಪಿ ಶಶಿಧರ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮಂತಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ , ವಿವಿಧ ಸಂಘ-ಸಂಸ್ಥೆಯ ಮುಖಂಡರುಗಳು ಹಾಜರಿದ್ದರು.