ಕುಶಾಲನಗರದಲ್ಲಿ 1501ನೇ ಈದ್ ಮಿಲಾದ್ ಆಚರಣೆ: ಸೌಹಾರ್ದತೆಯಿಂದ ಬಾಳಲು ಶಾಸಕ ಡಾ. ಮಂತರ್ ಗೌಡ ಕರೆ
admincoorgdaily

ಕುಶಾಲನಗರ,ಸೆಂ೬: ದಾರುಲ್ ಉಲೂಂ ಮದ್ರಸ ಹಾಗೂ ಹಿಲಾಲ್ ಮಸೀದಿ ವತಿಯಿಂದ 1501 ನೇ ವರ್ಷದ ಈದ್ ಮಿಲಾದ್ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಅವರು,
ಪ್ರವಾದಿಯವರು ೧೫೦೦ ವರ್ಷಗಳ ಮುಂಚಿತವಾಗಿಯೇ ಸಮಾನತೆ, ಸಹೋದರತೆ, ಮಾನವೀಯತೆಯ ಬಗ್ಗೆ ಸಾರಿ ಹೇಳಿದ್ದರು. ಅದರಂತೆ ಎಲ್ಲರೂ ನಡೆದುಕೊಳ್ಳಬೇಕು. ಆಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಎಲ್ಲಾ ಧರ್ಮವೂ ಪರಸ್ಪರ ಸಾಹೋದರ್ಯತೆಯಿಂದ ಇರಲು ತಿಳಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲರಾದ ಉನೈಸ್ ಫೈಜ಼ಿ, ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳಗಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮುಸಲ್ಮಾನನ ಮೇಲಿದೆ ಎಂದರು.
ಪ್ರಾಸ್ತಾವಿಕ ನುಡಿ ನುಡಿದ ಹಿಲಾಲ್ ಮಸೀದಿ ಕಾರ್ಯದರ್ಶಿ ಇ.ಕೆ.ಅಬ್ದುಲ್ ಕರೀಂ, ಪ್ರವಾದಿಯವರ ಸಂದೇಶವನ್ನು ಸಾರಿದರು.
ಕುಶಾಲನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಶಿಧರ್ ಮಾತನಾಡಿ, ಇಸ್ಲಾಂ ಸಹನೆ, ಸೈರಣೆ, ಸಾಹೋದರತೆಯನ್ನು ಸಾರುತ್ತದೆ. ಪ್ರವಾದಿಯವರು 1500 ವರ್ಷಗಳ ಮುಂಚೆಯೇ ಸಹೋದರತ್ವ, ಭ್ರಾತೃತ್ವ, ಮಾನವೀಯತೆ ಹಾಗೂ ಸಮಾನತೆಯನ್ನು ಸಾರಿದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಕ್ಷಿಪ್ರ ಕಾಲಘಟ್ಟದಲ್ಲಿ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು, ಪ್ರೀತಿಯನ್ನು ಸಾರಿದ ಮಹಾನ್ ವ್ಯಕ್ತಿತ್ವ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರದ್ದಾಗಿದೆ ಎಂದರು.
ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಜೆ.ಇರ್ಫಾನ್ ಹಾಗೂ ಪುರಸಭೆ ಮಾಜಿ ಸದಸ್ಯ ಶೇಖ್ ಖಲೀಮುಲ್ಲಾ ಮಾತನಾಡಿ, ಈದ್ ಮಿಲಾದ್ ಸಂದೇಶವನ್ನು ವಿನಿಮಯಗೊಳಿಸಲು ಮಾತ್ರ ಸೀಮಿತವಾಗದೇ, ಪ್ರವಾದಿಯವರ ಸಾರಿದ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಈದ್ ಮಿಲಾದ್ ಹಿನ್ನಲೆ ದಾರುಲ್ ಉಲೂಂ ಮದ್ರಸದ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಹಿಲಾಲ್ ಮಸೀದಿಯ ಖತೀಬರಾದ ಶಾಫಿ ಫೈಜ಼ಿ ಇರ್ಪಾನಿಯವರು ಪ್ರಾರ್ಥಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಅಧ್ಯಕ್ಷತೆಯನ್ನು ಸತ್ತಾರ್ ವಹಿಸಿದ್ದರು. ಹಿಲಾಲ್ ಮಸೀದಿ ಸಹ ಕಾರ್ಯದರ್ಶಿ ಹನೀಫ್ ಸ್ವಾಗತಿಸಿದರು.
ಈ ಸಂದರ್ಭ ಹಿಲಾಲ್ ಮಸೀದಿ ಪದಾಧಿಕಾರಿಗಳು, ದಾರುಲ್ ಉಲೂಂ ಮದ್ರಸದ ಉಸ್ತಾದರು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ನ ಸದಸ್ಯರು ಹಾಗೂ ಜಮಾಅತ್ ಸದಸ್ಯರು ಇದ್ದರು.
ಮೀಲಾದ್ ಜಾತಾ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನ ಹಿನ್ನಲೆ ದಾರುಲ್ ಉಲೂಂ ಮದ್ರಸ ಹಾಗೂ ಹಿಲಾಲ್ ಮಸೀದಿ ವತಿಯಿಂದ ಮೀಲಾದ್ ಜಾತಾ ನಡೆಸಲಾಯಿತು. ದಾರುಲ್ ಉಲೂಂ ಮದ್ರಸದಿಂದ ಕುಶಾಲನಗರ ಮುಖ್ಯ ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಮೀಲಾದ್ ಜಾತಾ ಸಾಗಿತು. ಮದ್ರಸ ವಿದ್ಯಾರ್ಥಿಗಳಿಗೆ ಕುಶಾಲನಗರದ ಕಾರ್ಯಪ್ಪ ವೃತ್ತ ಹಾಗೂ ದಂಡಿನಪೇಟೆ ಸರ್ಕಲ್ ನಲ್ಲಿ ದಫ್ ಪ್ರದರ್ಶಿಸಲಾಯಿತು.