Kodagu

ಆಗಸ್ಟ್‌ 3ರಂದು ಪೊನ್ನಂಪೇಟೆಯಲ್ಲಿ 15ನೇ ವರ್ಷದ 'ಕಕ್ಕಡ ಪದ್‌ನೆಟ್ಟ್' ಆಚರಣೆ ಪಂಜಿನ ಮೆರವಣಿಗೆ, ವಿದ್ಯಾರ್ಥಿಗಳ ಸನ್ಮಾನ ಹಾಗೂ ಕೊಡವ ನಾಟಕ ಆಯೋಜನೆ

admincoorgdaily

ಆಗಸ್ಟ್‌ 3ರಂದು ಪೊನ್ನಂಪೇಟೆಯಲ್ಲಿ 15ನೇ ವರ್ಷದ 'ಕಕ್ಕಡ ಪದ್‌ನೆಟ್ಟ್' ಆಚರಣೆ ಪಂಜಿನ ಮೆರವಣಿಗೆ, ವಿದ್ಯಾರ್ಥಿಗಳ ಸನ್ಮಾನ ಹಾಗೂ ಕೊಡವ ನಾಟಕ ಆಯೋಜನೆ

ಪೊನ್ನಂಪೇಟೆ, ಜು. 23: ಕೊಡವ ಹಿತ ರಕ್ಷಣಾ ಬಳಗ ಕ್'ಗ್ಗಟ್ಟ್ ನಾಡ್–ಪೊನ್ನಂಪೇಟೆ ವತಿಯಿಂದ 15ನೇ ವರ್ಷದ 'ಕಕ್ಕಡ ಪದ್‌ನೆಟ್ಟ್' ಆಚರಣೆಯನ್ನು ಆಗಸ್ಟ್‌ 3ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಚಿರಿಯಪಂಡ ರಾಜಾನಂಜಪ್ಪ ತಿಳಿಸಿದ್ದಾರೆ.

ಪೊನ್ನಂಪೇಟೆ ಕೊಡವ ಸಮಾಜದ ರಿಕ್ರಿಯೇಷನ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದ ಅವರು, ಅಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಚೆಪ್ಪುಡಿರ ಡಾ. ಕುಶಾಲಪ್ಪ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

 ಕಾರ್ಯಕ್ರಮದ ಅಂಗವಾಗಿ ಸಂಜೆ 6 ಗಂಟೆಗೆ ಪೊನ್ನಂಪೇಟೆ ಮುಖ್ಯ ಬೀದಿಯಲ್ಲಿ ಸಾಂಪ್ರದಾಯಿಕ 'ತೂಡ್' (ಪಂಜಿನ) ಮೆರವಣಿಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ 'ಕುರ್ಕಂಗ' ಕೊಡವ ನಾಟಕದ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿ ಸಂಸ್ಕೃತಿಯೊಂದಿಗೆ ನಂಟು ಹೊಂದಿರುವ ಕೊಡವ ಜನಾಂಗದಲ್ಲಿ 'ಕಕ್ಕಡ ಪದ್‌ನೆಟ್ಟ್' ಪ್ರಮುಖ ಸಾಂಪ್ರದಾಯಿಕ ಆಚರಣೆಯಾಗಿದೆ. ಮಳೆಗಾಲದ ಕೃಷಿ ಚಟುವಟಿಕೆಗಳ ನಡುವೆ ದೇಹದ ಆರೋಗ್ಯ ಮತ್ತು ಉಷ್ಣಾಂಶ ಕಾಪಾಡಿಕೊಳ್ಳುವ ಉದ್ದೇಶದಿಂದ ಕಕ್ಕಡ ಸೊಪ್ಪು, ನಾಟಿ ಕೋಳಿ, ಅಣಬೆ, ಏಡಿ, ಮೀನು ಸೇರಿದಂತೆ ವಿವಿಧ ಪೌಷ್ಟಿಕ ಆಹಾರಗಳನ್ನು ಸೇವಿಸುವ ಸಂಪ್ರದಾಯವನ್ನು ಈ ಹಬ್ಬ ಪ್ರತಿಬಿಂಬಿಸುತ್ತದೆ. ಕೃಷಿ ಪದ್ಧತಿಗಳಲ್ಲಿ ಬದಲಾವಣೆಗಳಾದರೂ, ಕೊಡವ ಹಿತ ರಕ್ಷಣಾ ಬಳಗ ಕಳೆದ 14 ವರ್ಷಗಳಿಂದ ಈ ಆಚರಣೆಯನ್ನು ನಿರಂತರವಾಗಿ ನಡೆಸುತ್ತಾ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಚಕ್ಕೆರ ರಮೇಶ್, ಗೌರವ ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ ಹಾಗೂ ಸದಸ್ಯರಾದ ಅಡ್ಡಂಡ ಸುನಿಲ್, ಆಲೇಮಾಡ ನವೀನ್, ಅಜ್ಜಿಕುಟ್ಟೀರ ರಂಜಿ, ಕೊಣಿಯಂಡ ಸಂಜು ಸೋಮಯ್ಯ, ಮುದ್ದಿಯಡ ಮಂಜು ಗಣಪತಿ, ಕರ್ತಮಾಡ ನರೇಂದ್ರ, ಚೇಂದಿರ ವಿಜು, ಮಲಚೀರ ಉತ್ತಪ್ಪ, ಚೆಪ್ಪುಡಿರ ಸುನೀಲ್, ಪುಳ್ಳಂಗಡ ಪವನ್, ಪಟ್ರಂಗಡ ರಂಜನ್, ಮಚ್ಚಮಾಡ ಮಂಜು, ತೀತಮಾಡ ವಾಸು, ಮತ್ರಂಡ ಜತಿನ್, ಚೇಯಂಡ ಶಮಿ, ಅಜ್ಜಿಕುಟ್ಟೀರ ಶುಭ, ಬೊಳ್ಳಿಮಾಡ ಧನು ದೇವಯ್ಯ ಹಾಗೂ ಉಳುವಂಗಡ ಲೋಹಿತ್ ಭೀಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.