Kodagu

ಗೋಣಿಕೊಪ್ಪದ ಉಮಾಮಹೇಶ್ವರಿ ಬಡಾವಣೆಯಲ್ಲಿ 15ನೇ ವರ್ಷದ ಗೌರಿ ಗಣೇಶೋತ್ಸವ ಸಂಭ್ರಮ; ಗ್ರಾಮೀಣ ಕ್ರೀಡಾಕೂಟ

admincoorgdaily

ಗೋಣಿಕೊಪ್ಪದ ಉಮಾಮಹೇಶ್ವರಿ ಬಡಾವಣೆಯಲ್ಲಿ 15ನೇ ವರ್ಷದ ಗೌರಿ ಗಣೇಶೋತ್ಸವ ಸಂಭ್ರಮ; ಗ್ರಾಮೀಣ ಕ್ರೀಡಾಕೂಟ
ಗೋಣಿಕೊಪ್ಪ: ಗೋಣಿಕೊಪ್ಪದ ಉಮಾಮಹೇಶ್ವರಿ ಬಡಾವಣೆಯ ಪ್ರಸನ್ನ ಗಣಪತಿ ಸೇವಾ ಸಂಘದ ವತಿಯಿಂದ 15ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಗಣಪತಿ ಪ್ರತಿಷ್ಠಾಪನೆ ಹಾಗೂ ಗ್ರಾಮೀಣ ಕ್ರೀಡಾಕೂಟವನ್ನು ಸಂಭ್ರಮದಿಂದ ಆಯೋಜಿಸಲಾಯಿತು.

ಮಂಗಳವಾರ ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ ನೆರವೇರಿಸಲಾಯಿತು. ಬಳಿಕ ಬೆಳಗ್ಗೆ 7 ಗಂಟೆಗೆ ಅರ್ಚಕ ನಾಗೇಶ್ ಅವರ ನೇತೃತ್ವದಲ್ಲಿ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ನಂತರ ಸ್ಥಳೀಯರಿಗಾಗಿ ಗ್ರಾಮೀಣ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಕಾಳೇಗೌಡ ಅವರು ಪುಷ್ಪ ತುಂಬಿದ ಬಲೂನ್ ಸಿಡಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಗಣೇಶೋತ್ಸವವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗಿರದೆ, ಜನರಲ್ಲಿ ಒಗ್ಗಟ್ಟು, ಬಾಂಧವ್ಯ ಮತ್ತು ರಾಷ್ಟ್ರೀಯ ಚಿಂತನೆ ಬೆಳೆಸುವ ಉದ್ದೇಶದಿಂದಲೂ ಆಚರಣೆಗೆ ಬಂದಿರುವ ಮಹತ್ವದ ಹಬ್ಬವಾಗಿದೆ. ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಲು ಗಣೇಶೋತ್ಸವ ಪ್ರಮುಖ ಪಾತ್ರ ವಹಿಸಿತ್ತು. ಅದೇ ಆಶಯವನ್ನು ಇಂದಿನ ಗಣೇಶೋತ್ಸವ ಸಮಿತಿಗಳು ಮುಂದುವರಿಸಬೇಕು ಎಂದರು.

ಕಾಟಾಚಾರಕ್ಕೆ ಉತ್ಸವಗಳನ್ನು ಆಚರಿಸುವ ಬದಲು ಪ್ರಬಲ ಇಚ್ಛಾಶಕ್ತಿ, ಶಿಸ್ತು ಮತ್ತು ಜವಾಬ್ದಾರಿಯಿಂದ ಉತ್ಸವಗಳನ್ನು ನಡೆಸಿದಾಗ ಮಾತ್ರ ಅದರ ನಿಜವಾದ ಉದ್ದೇಶ ಈಡೇರುತ್ತದೆ. ಪ್ರತಿಯೊಂದು ಗಣೇಶೋತ್ಸವ ಸಮಿತಿಯೂ ಶಿಸ್ತು ಪಾಲನೆಯೊಂದಿಗೆ ಹಬ್ಬವನ್ನು ಆಚರಿಸಿದಾಗ ಗಣೇಶೋತ್ಸವಕ್ಕೆ ಮತ್ತಷ್ಟು ಅರ್ಥ ಬರುತ್ತದೆ ಎಂದು ಸಲಹೆ ನೀಡಿದರು.

ಗಣೇಶ ಪ್ರತಿಷ್ಠಾಪನೆಯು ಮಹಿಳೆಯರಿಗೂ ವಿಶೇಷವಾದ ಹಬ್ಬವಾಗಿದ್ದು, ಕುಟುಂಬ ಹಾಗೂ ಸಮಾಜದಲ್ಲಿ ಸಂತೋಷ, ಶಾಂತಿ ಮತ್ತು ಬಾಂಧವ್ಯವನ್ನು ಹೆಚ್ಚಿಸುವಂತಾಗಲಿ. ಗಣೇಶೋತ್ಸವದ ಮೂಲಕ ಎಲ್ಲರ ವಿಘ್ನಗಳು ನಿವಾರಣೆಯಾಗಲಿ, ಕಷ್ಟಗಳು ಪರಿಹಾರವಾಗಿ ಬದುಕಿಗೆ ಹೊಸ ಶಕ್ತಿ ದೊರೆಯಲಿ ಎಂದು ಹಾರೈಸಿದರು.

ಕ್ರೀಡಾಕೂಟದಲ್ಲಿ ಬಿಸ್ಕೆಟ್ ಕಚ್ಚುವುದು, ಒಂಟಿ ಕಾಲಿನಲ್ಲಿ ನೀರಿನ ಗ್ಲಾಸ್ ಬ್ಯಾಲೆನ್ಸ್ ಮಾಡುವುದು, ದಾರ ಎಳೆಯುವುದು, ಮಕ್ಕಳಿಗೆ ಬಲೂನ್ ಓಟ ನಡೆಯಿತು.
ಕಾರ್ಯಕ್ರಮದಲ್ಲಿ ದಾನಿಗಳು ಹಾಗೂ ಚಿನ್ನ-ಬೆಳ್ಳಿ ವ್ಯಾಪಾರಿ ಎಂ.ಜಿ. ನಾಗರಾಜ್, ಹಿರಿಯ ಪತ್ರಕರ್ತ ಎನ್. ದಿನೇಶ್, ಪ್ರಸನ್ನ ಗಣಪತಿ ಯುವಕ ಸಂಘದ ಉಪಾಧ್ಯಕ್ಷ ಅನಿಲ್ ಉಪಸ್ಥಿತರಿದ್ದರು.

ಆಶಾ ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಜಗದೀಶ್ ಜೋಡುಬೀಟಿ, ಉಪಾಧ್ಯಕ್ಷ ದಿಲೀಪ್, ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ಅನ್ವಿತ್, ಪದಾಧಿಕಾರಿಗಳಾದ ಭರತ್, ಲಿನಾ ರಾಘವೇಂದ್ರ, ಮುರುಳಿ, ಮುಕೇಶ್, ರಾಘವೇಂದ್ರ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.