ಬೆಂಗಳೂರಿನಲ್ಲಿ ಕುಳಿತು ಅಮೆರಿಕಾ ಪ್ರಜೆಗಳನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ 16 ಮಂದಿಯ ಬಂಧನ

Oct 14, 2025 - 15:45
 0  468
ಬೆಂಗಳೂರಿನಲ್ಲಿ ಕುಳಿತು ಅಮೆರಿಕಾ ಪ್ರಜೆಗಳನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ 16 ಮಂದಿಯ ಬಂಧನ
Photo credit: enadu (ಸಾಂದರ್ಭಿಕ ಚಿತ್ರ)

ಬೆಂಗಳೂರು, ಅ.14: ಅಮೆರಿಕಾದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ನಕಲಿ ಬಿಪಿಒ (BPO) ಸಂಸ್ಥೆಯ ಸೋಗಿನಲ್ಲಿ ವಂಚನೆ ನಡೆಸುತ್ತಿದ್ದ ಅಂತರರಾಜ್ಯ ಗ್ಯಾಂಗ್‌ನ್ನು ನಗರ ಪೊಲೀಸರು ಪತ್ತೆಹಚ್ಚಿ 16 ಮಂದಿಯನ್ನು ಬಂಧಿಸಿದ್ದಾರೆ.

ಹೆಚ್‌ಎಸ್‌ಆರ್ ಲೇಔಟ್‌ನ 27ನೇ ಮುಖ್ಯರಸ್ತೆಯಲ್ಲಿರುವ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ತಂಡದ ಮೇಲೆ ಪೊಲೀಸರು ದಾಳಿ ನಡೆಸಿ 40ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಹಾಗೂ ಅನೇಕ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾಹಿತಿಯ ಆಧಾರದಲ್ಲಿ ಇನ್‌ಸ್ಪೆಕ್ಟರ್ ಹರೀಶ್ ಕುಮಾರ್ ಸು ಮೊಟೋ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದು, ಪ್ರಕರಣದ ತನಿಖೆ ಈಗ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಮಾಡುತ್ತಿದ್ದಾರೆ.

ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿಗಳು ‘ಸಿಬಿಟ್ಸ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್’ ಎಂಬ ಹೆಸರಿನಲ್ಲಿ ಎರಡು ವರ್ಷಗಳ ಹಿಂದೆ ನಕಲಿ ಬಿಪಿಒ ಸಂಸ್ಥೆ ಸ್ಥಾಪಿಸಿದ್ದರು. ಕಟ್ಟಡದ ಎರಡು ಮಹಡಿಗಳಲ್ಲಿ ಸುಮಾರು 25 ಮಂದಿ ಯುವಕರು ಮತ್ತು ಯುವತಿಯರನ್ನು ನೇಮಿಸಿ, ವಿದೇಶಿ ಪ್ರಜೆಗಳಿಗೆ ಡಿಜಿಟಲ್ ಅರೆಸ್ಟ್ ಮಾಡುವ ತರಬೇತಿ ನೀಡಲಾಗುತ್ತಿತ್ತು.

 ಈ ತಂಡದ ಸದಸ್ಯರು ರಾತ್ರಿ ವೇಳೆಯಲ್ಲಿ ಅಮೆರಿಕಾ ಸೇರಿದಂತೆ ವಿದೇಶಗಳ ನಾಗರಿಕರಿಗೆ ಪೊಲೀಸ್ ಅಥವಾ ತನಿಖಾ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ಕರೆಮಾಡಿ, “ನಿಮ್ಮ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿದೆ” ಎಂದು ಬೆದರಿಸುತ್ತಿದ್ದರು. ನಂತರ ‘ಡಿಜಿಟಲ್ ಅರೆಸ್ಟ್’ ಮಾಡಿ “ನಾವು ನಿಮಗೆ ಕಾನೂನು ರಕ್ಷಣೆ ನೀಡುತ್ತೇವೆ” ಎಂಬ ನೆಪದಲ್ಲಿ ಹಣ ವರ್ಗಾಯಿಸಲು ಒತ್ತಡ ಹೇರುತ್ತಿದ್ದರು.

 ಈ ವಂಚನೆಗಾಗಿ ಅವರು ಯುಎಸ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್, ಯುಎಸ್ ಪೋಸ್ಟಲ್ ಸರ್ವಿಸ್, ಹಾಗೂ ಯುಎಸ್ ಕಸ್ಟಮ್ಸ್ ಅಂಡ್ ಬಾರ್ಡರ್ ಪ್ರೊಟೆಕ್ಷನ್ ಸಂಸ್ಥೆಗಳ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದರು. ನಕಲಿ ಗುರುತಿನ ಚೀಟಿಗಳು, ಅರೆಸ್ಟ್ ವಾರಂಟ್‌ಗಳು ಹಾಗೂ ಲೈವ್ ಸರ್ವರ್‌ಗಳ ಮೂಲಕ ನಿಜವಾದ ಕಚೇರಿಯಂತೆಯೇ ವಾತಾವರಣ ನಿರ್ಮಿಸಿ ಅಮೆರಿಕನ್ ಪ್ರಜೆಗಳನ್ನು ವಂಚಿಸುತ್ತಿದ್ದರು.

 ಬಂಧಿತ 16 ಮಂದಿಯಲ್ಲಿ ಮಹಾರಾಷ್ಟ್ರದ 8 ಮಂದಿ, ಮೇಘಾಲಯದ 4 ಮಂದಿ, ಹಾಗೂ ಒರಿಸ್ಸಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನ ತಲಾ ಒಬ್ಬರು ಆರೋಪಿಗಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ವಶಪಡಿಸಿಕೊಂಡಿರುವ ಕಂಪ್ಯೂಟರ್‌ಗಳು ಮತ್ತು ಡಿಜಿಟಲ್ ಸಾಧನಗಳನ್ನು ಫರೆನ್ಸಿಕ್ ವಿಶ್ಲೇಷಣೆಗೆ ಕಳುಹಿಸಲಾಗಿದ್ದು, ವಂಚನೆಗೆ ಸಂಬಂಧಿಸಿದ ಹಣ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0