16 ವರ್ಷದ ಬಾಲಕಿಯ ರುಂಡ ಕಡಿದು ಹತ್ಯೆ - ಆರೋಪಿಯ ಅಪರಾಧ ಸಾಬೀತು; ನ.19ರಂದು ಪ್ರಕಟಗೊಳ್ಳಲಿದೆ ಶಿಕ್ಷೆ ಪ್ರಮಾಣದ ತೀರ್ಪು
admincoorgdaily

ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ರುಂಡ ಕಡಿದು 16 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ ಪ್ರಕರಣದ ಆರೋಪಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ (36) ನ್ನು ಅಪರಾಧಿ ಎಂದು ಮೂರನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಘೋಷಿಸಿದೆ. ಶಿಕ್ಷೆ ಪ್ರಮಾಣ ಪ್ರಕಟಿಸುವ ವಿಚಾರಣೆಯನ್ನು ನ.19 ಕ್ಕೆ ಮುಂದೂಡಲಾಗಿದೆ.
ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಜಿ.ಸುರೇಂದ್ರ ಅವರು ಆರೋಪಿ ಓಂಕಾರಪ್ಪ ಅಲಿಯಾಸ್ ಪ್ರಕಾಶನ ಅಪರಾಧ ಸಾಬೀತಾಗಿದ್ದು, ಅಪರಾಧಿ ಎಂದು ತೀರ್ಪು ನೀಡಿದರು.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರುದ್ರಪ್ರಸನ್ನ ವಾದ ಮಂಡಿಸಿದ್ದರು.
ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ 2024ರ ಮೇ 9 ರಂದು ಅಪರಾಧಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ 16 ವರ್ಷದ ಬಾಲಕಿಯ ರುಂಡ ಕಡಿದು ಅಮಾನುಷವಾಗಿ ಹತ್ಯೆ ಮಾಡಿದ್ದ. ಬಾಲಕಿಯ ತಲೆಯನ್ನು ತೆಗೆದುಕೊಂಡು ಸಮೀಪದ ಪೊದೆಯಲ್ಲಿ ಅಡಗಿ ಕುಳಿತಿದ್ದ. ಸತತ ಕಾರ್ಯಾಚರಣೆ ನಡೆಸಿದ ಪೊಲೀಸರು ಈತನನ್ನು ಬಂಧಿಸಿ, ರುಂಡವನ್ನು ವಶಪಡಿಸಿಕೊಂಡಿದ್ದರು. ಈ ಘಟನೆ ಸಾರ್ವಜನಿಕರಲ್ಲಿ ತಲ್ಲಣ ಮೂಡಿಸಿತ್ತು.