Kodagu

ಬಿಲ್ಲವ ಸಮಾಜ ನಾಪೋಕ್ಲುವಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿ ಆಚರಣೆ

admincoorgdaily

ಬಿಲ್ಲವ ಸಮಾಜ ನಾಪೋಕ್ಲುವಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿ ಆಚರಣೆ
ನಾಪೋಕ್ಲು: ಬಿಲ್ಲವ ಸಮಾಜ ನಾಪೋಕ್ಲು (ರಿ) ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿ ಕಾರ್ಯಕ್ರಮವನ್ನು ಸಂಘದ ಸ್ವಂತ ಜಾಗದಲ್ಲಿ ಸೆ.6 ರಂದು ಅರ್ಥಪೂರ್ಣವಾಗಿ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಈ ಬಾರಿಯ ವಿಶೇಷವೆಂದರೆ ಶಿಕ್ಷಕರ ದಿನಾಚರಣೆಯನ್ನು ಸಂಯೋಜಿಸಿ, ಬಿಲ್ಲವ ಸಮಾಜದ ಸದಸ್ಯರಾಗಿರುವ ಶಿಕ್ಷಕರಿಗೆ "ಗುರು ನಮನ" ಸಲ್ಲಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಶ್ರೀಮತಿ ಜಾಜಿ ಮೋಹನ್, ಸಹ ಶಿಕ್ಷಕಿ, ಸರ್ಕಾರಿ ಪ್ರಾಥಮಿಕ ಶಾಲೆ, ಚೆನ್ನಯನಕೋಟೆ, ವಿರಾಜಪೇಟೆ ಭಾಗವಹಿಸಿ ಮಾತನಾಡಿ, ಮಕ್ಕಳಲ್ಲಿ ಸಮಾಜಸೇವೆಯ ಮನೋಭಾವ ಬೆಳೆಸಬೇಕು, ನಾರಾಯಣಗುರುಗಳ ಸಮಾನತೆ ಮತ್ತು ಮಾನವೀಯತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮತ್ತೋರ್ವ ಮುಖ್ಯ ಅತಿಥಿ ಶ್ರೀ ಸತೀಶ್ ಸಿ.ಎಸ್, ಮುಖ್ಯೋಪಾಧ್ಯಾಯರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಳ್ಳೂರು, ಸೋಮವಾರಪೇಟೆ, ಮಾತನಾಡಿ ನಾಪೋಕ್ಲುವಿನ ಸುಮಾರು 134 ಕುಟುಂಬಗಳು ಒಂದಾಗಿ ಗುರುಗಳನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ ಬಿಲ್ಲವ ಸಮಾಜದ ಸದಸ್ಯರು ಹಾಗೂ ಅವರ ಕುಟುಂಬದ ಶಿಕ್ಷಕರಾದ ಶ್ರೀಮತಿ ಪುಷ್ಪಾವತಿ ಧನಂಜಯ, ಶ್ರೀಮತಿ ಸಾವಿತ್ರಿ ವಿಠಲ್, ಶ್ರೀಮತಿ ಹೇಮಾಮಾಲಿನಿ ಅರುಣ, ಶ್ರೀಮತಿ ರಶ್ಮಿ ಕಿರಣ, ಶ್ರೀ ಕಿಶೋರ್ ಬಿ.ಎಸ್., ಕು. ಹೇಮಾವತಿ ಹಾಗೂ ಶ್ರೀಮತಿ ಕೆ.ಬಿ. ಸರಸ್ವತಿ ಅವರಿಗೆ ಗುರು ನಮನ ಸಲ್ಲಿಸಿ ಗೌರವಿಸಲಾಯಿತು.

ಸಂಘದ ನಿರ್ದೇಶಕರಾದ ಶ್ರೀ ಧನಂಜಯ ಬಿ.ಜಿ. ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿ, ಗುರುಗಳ ಜೀವನ ಹಾಗೂ ಸಮಾಜ ಸುಧಾರಣೆಯ ಸಂದೇಶಗಳ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಬಿಲ್ಲವ ಸಮಾಜ ನಾಪೋಕ್ಲುವಿನ ಅಧ್ಯಕ್ಷ ಶ್ರೀ ಬಿ.ಎಂ. ಪ್ರತೀಪ್ ಮಾತನಾಡಿ, ಸಮಾಜದ ಸ್ವಂತ ಜಾಗದಲ್ಲಿ ಜಯಂತಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಬಿಲ್ಲವ ಸಮಾಜ ನಾಪೋಕ್ಲು ಹಾಗೂ ಕೊಡಗು ಜಿಲ್ಲೆಯ ಮಕ್ಕಳು ಯುಪಿಎಸ್‌ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬುದು ತಮ್ಮ ಕನಸು ಎಂದು ಹೇಳಿದರು.

ಕಾರ್ಯಕ್ರಮದ ಬಳಿಕ ಸದಸ್ಯರು ಹಾಗೂ ಮಕ್ಕಳಿಗಾಗಿ ಮನೋರಂಜನಾ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವಸಂತ ಹಾಗೂ ಜಗನ್ನಾಥ, ಕೊಡಗು ಜಿಲ್ಲಾ ಬಿಲ್ಲವ ಸಮಾಜ ಒಕ್ಕೂಟದ ಉಪಾಧ್ಯಕ್ಷ ವಿಠಲ್ ಬಿ.ಬಿ. ಸೇರಿದಂತೆ ಸಮಾಜದ ಸದಸ್ಯರು ಉಪಸ್ಥಿತರಿದ್ದರು.

ಖಜಾಂಚಿ ಶ್ರೀ ದೀಪಕ್ ಬಿ.ಡಿ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಲೋಹಿತ್ ಕೆ.ಎಸ್. ವಂದಿಸಿದರು.