Kodagu

ದಸರಾಗೆ 2 ಕೋಟಿ ಖರ್ಚು, ಕೋಟೆಗೆ ಮಾತ್ರ ನಿರ್ಲಕ್ಷ್ಯ: ಜಿಲ್ಲಾಡಳಿತದ ವಿರುದ್ಧ ಆಕ್ರೋಶ

admincoorgdaily

ದಸರಾಗೆ 2 ಕೋಟಿ ಖರ್ಚು, ಕೋಟೆಗೆ ಮಾತ್ರ ನಿರ್ಲಕ್ಷ್ಯ: ಜಿಲ್ಲಾಡಳಿತದ ವಿರುದ್ಧ ಆಕ್ರೋಶ
ವಿರಾಜಪೇಟೆ: ಮೇಲೆಲ್ಲ ತಳುಕು, ಒಳಗಡೆ ಹುಳುಕು" ಇದು ಮಂಜಿನ ನಗರಿ ಮಡಿಕೇರಿಯ ಐತಿಹಾಸಿಕ ಕೋಟೆಯ ಇಂದಿನ ನೈಜ ಸ್ಥಿತಿ. ಈ ಬಾರಿಯ ದಸರಾ ಮಹೋತ್ಸವಕ್ಕಾಗಿ ಜಿಲ್ಲಾಡಳಿತ ಸುಮಾರು ಎರಡು ಕೋಟಿ ರೂಪಾಯಿಗಳಷ್ಟು ಭಾರಿ ಮೊತ್ತವನ್ನು ಖರ್ಚು ಮಾಡಿ ವಿಜೃಂಭಣೆಯಿಂದ ಆಚರಣೆ ಮಾಡಿದರೂ, ಐತಿಹಾಸಿಕ ಪ್ರಸಿದ್ಧ ಕೋಟೆಯ ಶೋಚನೀಯ ಸ್ಥಿತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕರ್ನಾಟಕ ಕಾಫಿ ರೈತ ಸಂಘದ ಕೊಡಗು ಘಟಕದ ಸಂಚಾಲಕರಾದ ಕೆ.ಎಚ್. ಹನೀಫ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

 ಈ ಕುರಿತು ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಕೋಟೆಯ ಪ್ರಸ್ತುತ ದುಸ್ಥಿತಿಯ ಸಂಪೂರ್ಣ ಚಿತ್ರಣವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟು ಸುದೀರ್ಘವಾಗಿ ಮಾತನಾಡಿದ ಅವರು, ಜಿಲ್ಲಾಡಳಿತದ ಧೋರಣೆಯನ್ನು ಕಠಿಣ ಶಬ್ದಗಳಿಂದ ಖಂಡಿಸಿದರು. 

   ದಸರಾ ಆಚರಣೆಯ ನೆಪದಲ್ಲಿ ಕೋಟೆಗೆ ರಾತ್ರಿ ವೇಳೆ ಕಣ್ಣು ಕೋರೈಸುವ ವಿದ್ಯುತ್ ದೀಪಾಲಂಕಾರ (ಲೈಟಿಂಗ್ಸ್) ಮಾಡಲಾಗಿತ್ತು. ಆದರೆ, ಕೋಟೆಯ ಸುತ್ತಮುತ್ತ ದಟ್ಟವಾಗಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿರಲಿಲ್ಲ. ರಾತ್ರಿಯ ಬೆಳಕಿನಲ್ಲಿ ಕೋಟೆಯ ಹಿಂಭಾಗದಲ್ಲಿ ಶೇಖರಣೆಯಾಗಿದ್ದ ಕಸದ ರಾಶಿ ಹಾಗೂ ಗಲೀಜು ಸಾರ್ವಜನಿಕರ ಕಣ್ಣಿಗೆ ಕಾಣಿಸದಂತೆ ಜಾಣತನದಿಂದ ಮುಚ್ಚಿಡುವ ಕೆಲಸ ಮಾಡಲಾಗಿದೆಯೇ ಹೊರತು, ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. 
ಕೋಟೆಯ ಆವರಣದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಸೂಕ್ತ ರೀತಿಯಲ್ಲಿ ಶುದ್ಧೀಕರಿಸದೆ, ಅದೇ ಅಶುದ್ಧ ಟ್ಯಾಂಕ್‌ಗಳ ಮೇಲೆಯೇ ಲೈಟಿಂಗ್ ಹಾಕಿ ಸಾರ್ವಜನಿಕರನ್ನು ಮರಳು ಮಾಡಲಾಗಿದೆ. 

ಕೋಟೆಯ ಮೇಲ್ಚಾವಣಿಯು ಅತ್ಯಂತ ಶೋಚನೀಯ ಹಂತ ತಲುಪಿದ್ದು, ಯಾವುದೇ ಕ್ಷಣದಲ್ಲಾದರೂ ಕೆಳಗೆ ಕುಸಿದುಬೀಳುವ ಅಪಾಯವಿದೆ. ಇದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಹಾಗೂ ಸಾರ್ವಜನಿಕರ ಜೀವಕ್ಕೆ ನೇರ ಬೆದರಿಕೆಯಾಗಿದೆ
ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಈ ಪಾರಂಪರಿಕ ಸ್ಮಾರಕವನ್ನು ತಕ್ಷಣವೇ ಜೀರ್ಣೋದ್ಧಾರಗೊಳಿಸಿ ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಕ್ಷಣವೇ ಸಂಬಂಧಪಟ್ಟ ಪುರಾತತ್ವ ಹಾಗೂ ಆಡಳಿತ ಇಲಾಖೆಗಳಿಗೆ ಖಡಕ್ ಸೂಚನೆ ನೀಡಬೇಕು. ಅಲ್ಲದೆ, ಸ್ಥಳೀಯ ಶಾಸಕರ ಗಮನಕ್ಕೆ ಈ ಗಂಭೀರ ವಿಷಯವನ್ನು ತಂದು, ಸರ್ಕಾರದಿಂದ ಕೋಟೆಯ ಅಭಿವೃದ್ಧಿಗಾಗಿ ವಿಶೇಷ ಅನುದಾನವನ್ನು ತರಿಸಿ ಮಡಿಕೇರಿ ಕೋಟೆಯನ್ನು ಸುಸ್ಥಿತಿಗೆ ತರಬೇಕು ಎಂದು ಕೆ.ಎಚ್. ಹನೀಫ್ ಆಗ್ರಹಿಸಿದರು.

ಅನುದಾನ ಬಂದರೂ ಮೌನವೇಕೆ?': 

ಡಾ. ಐ.ಆರ್. ದುರ್ಗಾಪ್ರಸಾದ್ ಪ್ರಶ್ನೆ
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಡಾ. ಐ.ಆರ್. ದುರ್ಗಾಪ್ರಸಾದ್ ಅವರು, "ಮಡಿಕೇರಿ ದಸರಾ ಇಡೀ ದೇಶದಲ್ಲೇ ಅತ್ಯಂತ ಹೆಸರುವಾಸಿಯಾದ ಪ್ರಸಿದ್ಧ ಜನೋತ್ಸವ. ಈ ಹಬ್ಬದ ನಿರ್ವಹಣೆಗಾಗಿ ಸರಕಾರದಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತದೆ. ಹೀಗಿದ್ದರೂ ಜಿಲ್ಲಾಡಳಿತವು ಕೋಟೆಯ ಮೂಲಭೂತ ನಿರ್ವಹಣೆ ಮತ್ತು ಶುಚಿತ್ವದ ವಿಚಾರದಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿರುವುದಕ್ಕೆ ಕಾರಣವೇನು?" ಎಂದು ನೇರವಾಗಿ ಪ್ರಶ್ನಿಸಿದರು. 

ಕೊಡಗಿನ ಹೆಮ್ಮೆಯ ಐತಿಹಾಸಿಕ ಕೋಟೆಯನ್ನು ಜಿಲ್ಲಾಡಳಿತ ತಕ್ಷಣವೇ ತನ್ನ ಹದಗೆಟ್ಟ ಆಡಳಿತ ಶೈಲಿಯಿಂದ ಹೊರತಂದು, ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕೆಂದು ಒತ್ತಾಯಿಸಿದರು.