ಕೊಡಗು ಸೈನಿಕ ಶಾಲೆಯಲ್ಲಿ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ
admincoorgdaily

ಕುಶಾಲನಗರ, ಅ. 6: ಕೊಡಗು ಸೈನಿಕ ಶಾಲೆಯ 2026-27ನೇ ಸಾಲಿನ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟವು ಕೂಡಿಗೆಯ ಕ್ರೀಡಾಶಾಲೆಯ ಅಥ್ಲೆಟಿಕ್ಸ್ ಮೈದಾನದಲ್ಲಿ ವಿದ್ಯಾರ್ಥಿಗಳ ಉತ್ಸಾಹ ಮತ್ತು ಕ್ರೀಡಾಸ್ಪೂರ್ತಿಯೊಂದಿಗೆ ಮಂಗಳವಾರ ಆರಂಭಗೊಂಡಿತು.
ಶಾಲೆಯ ಪ್ರಭಾರೆ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಅವರು ಮುಖ್ಯ ಅತಿಥಿಯಾಗಿ ಹಾಗೂ ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್ ಅವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡಿದ್ದರು.
ಆಕರ್ಷಕ ಪಥಸಂಚಲನ ಮತ್ತು ಕ್ರೀಡಾ ಜ್ಯೋತಿಯನ್ನು ಬೆಳಗುವುದರೊಂದಿಗೆ ಉದ್ಘಾಟನಾ ಸಮಾರಂಭವು ಆರಂಭವಾಯಿತು. ಇದರೊಂದಿಗೆ ಶಾಂತಿಯ ದ್ಯೋತಕವಾಗಿ ಬಿಳಿ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಅವರು, ಎಲ್ಲಾ ಕ್ರೀಡಾ ಸ್ಪರ್ಧೆಗಳಲ್ಲಿ ಶ್ರೇಷ್ಠತೆಯನ್ನು ಮೆರೆಯಲು ಮತ್ತು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಕೆಡೆಟ್‌ಗಳಿಗೆ ಕರೆ ನೀಡಿದರು. ಶೀಘ್ರದಲ್ಲೇ ಕೊಡಗು ಸೈನಿಕ ಶಾಲೆಯಲ್ಲಿ ಆಯೋಜಿಸಲಾಗಲಿರುವ ಮುಂಬರುವ ದಕ್ಷಿಣ ವಲಯ ಕ್ರೀಡಾಕೂಟಕ್ಕೆ (South Zone Sports Tournament) ಈ ಅಥ್ಲೆಟಿಕ್ಸ್ ಕೂಟವು ಉತ್ತಮ ಪೂರ್ವಸಿದ್ಧತೆಯನ್ನುh ಒದಗಿಸಲಿದೆ ಎಂದು ಅವರು ಹೇಳಿದರು.
ಏಷ್ಯನ್ ಕ್ರೀಡಾಕೂಟದಲ್ಲಿ 'ನಾರಿ ಶಕ್ತಿ'ಯ ಸಾಧನೆಗಳನ್ನು ಸ್ಮರಿಸಿದ ಅವರು, ಮಹಿಳಾ ಅಥ್ಲೀಟ್‌ಗಳ ಅತ್ಯುತ್ತಮ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅಲ್ಲದೆ ಶಾಲೆಯ ಮಹಿಳಾ ಅಥ್ಲಿಟ್ ಗಳು ಆತ್ಮವಿಶ್ವಾಸ ಮತ್ತು ದೃಢತೆಯೊಂದಿಗೆ ವಿವಿಧ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು. ಪುರುಷ ಕ್ರೀಡಾಪಟುಗಳಿಗೆ ಸರಿಸಮನಾಗಿ, ಮತ್ತು ಹಲವು ಸಂದರ್ಭಗಳಲ್ಲಿ ಅವರಿಗಿಂತಲೂ ಉತ್ತಮವಾಗಿ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಮಹಿಳಾ ಅಥ್ಲೀಟ್‌ಗಳು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಶಾಲೆಯಲ್ಲಿ ಕ್ರೀಡಾ ಪ್ರತಿಭೆ, ಶಿಸ್ತು ಮತ್ತು ಸ್ಪರ್ಧಾತ್ಮಕ ಮನೋಭಾವದ ವಾರ್ಷಿಕ ಸಂಭ್ರಮಕ್ಕೆ ನಾಂದಿ ಹಾಡಿತು.