ಅರಮೇರಿ ಕಳಂಚೇರಿ ಮಠದಲ್ಲಿ 250ನೇ ಹೊಂಬೆಳಕು ಮಾಸಿಕ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮ; ಪೂರ್ವಭಾವಿ ಸಭೆ
admincoorgdaily

ವಿರಾಜಪೇಟೆ: ತಾಲೂಕಿನ ಅರಮೇರಿ ಕಳಂಚೇರಿ ಮಠದಲ್ಲಿ ನಡೆಯುತ್ತಿರುವ ಹೊಂಬೆಳಕು ಮಾಸಿಕ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮವು ತನ್ನ 250ನೇ ಕಂತಿನತ್ತ ದಾಪುಗಾಲಿಟ್ಟಿದ್ದು, ಡಿಸೆಂಬರ್ 13 ರಂದು ಶ್ರೀಮಠದ ಸಭಾಂಗಣದಲ್ಲಿ 250ನೇ ವಿಶೇಷ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ರೂಪುರೇಷೆ ಕುರಿತು ಅರಮೇರಿ ಕಳಂಚೇರಿ ಮಠದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಅರಮೇರಿ ಕಳಂಚೇರಿ ಮಠದ ಆಶ್ರಯದಲ್ಲಿ 2002ರ ನವೆಂಬರ್ 15ರಂದು ಹೊಂಬೆಳಕು ಮಾಸಿಕ ತತ್ತ್ವ ಚಿಂತನಾ ಗೋಷ್ಠಿ ಉದ್ಘಾಟನೆಗೊಂಡು, ಡಿಸೆಂಬರ್ 1, 2002ರಂದು ಬಸವ ಸಮಿತಿ ಬೆಂಗಳೂರು ಹಾಗೂ ಮಠದ ಸಹಯೋಗದಲ್ಲಿ ಬಸವ ವಾಹಿನಿ ಕಾರ್ಯಕ್ರಮದ ಅಂಗವಾಗಿ ಮೊದಲ ಕಾರ್ಯಕ್ರಮ ಶ್ರೀಮಠದಲ್ಲಿ ನಡೆದಿತ್ತು.
ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಆರಂಭಗೊಂಡ ಈ ಚಿಂತನಾ ಮಾಲಿಕೆ ಇದೀಗ 250ನೇ ಕಂತನ್ನು ತಲುಪಿರುವುದು ವಿಶೇಷವಾಗಿದೆ.
ಪೂರ್ವಭಾವಿ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು, "ಸಮಾಜದಲ್ಲಿ ಉತ್ತಮ ವಿಚಾರಗಳನ್ನು ಬಿತ್ತುವ ಉದ್ದೇಶದಿಂದ 2002ರಲ್ಲಿ ಆರಂಭವಾದ ಹೊಂಬೆಳಕು ಕಾರ್ಯಕ್ರಮವು ಭಕ್ತರು ಹಾಗೂ ಚಿಂತಕರ ಸಹಕಾರದಿಂದ 250ನೇ ಮೈಲಿಗಲ್ಲನ್ನು ತಲುಪುತ್ತಿರುವುದು ಸಂತಸದ ಸಂಗತಿ. ಈ ವಿಶೇಷ ಕಾರ್ಯಕ್ರಮಕ್ಕೆ ಖ್ಯಾತ ಚಿಂತಕರು ಹಾಗೂ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರಜಗಿ ಅವರು ಆಗಮಿಸುತ್ತಿರುವುದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದೆ. ಅವರ ಪ್ರೇರಣಾದಾಯಿ ಮಾತುಗಳು ಮತ್ತು ಮೌಲ್ಯಾಧಾರಿತ ಚಿಂತನೆಗಳು ಇಂದಿನ ಪೀಳಿಗೆಗೆ ಅತ್ಯಗತ್ಯವಾಗಿವೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸುವಂತಾಗಬೇಕು. ಶಿಕ್ಷಣ ಕ್ಷೇತ್ರದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಡಾ. ಕರಜಗಿ ಅವರ ವಿಚಾರಧಾರೆಗಳ ಸದುಪಯೋಗ ಪಡೆದುಕೊಳ್ಳಬೇಕು," ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿ ಮಾತನಾಡಿದ ವಿರಾಜಪೇಟೆಯ ಖ್ಯಾತ ವೈದ್ಯರು, ಪಕ್ಷಿತಜ್ಞರು ಹಾಗೂ ಶ್ರೀಮಠದ ಹಿತೈಷಿಗಳೂ ಆದ ಡಾ. ನರಸಿಂಹನ್ ಅವರು, "ಹೊಂಬೆಳಕು ಕಾರ್ಯಕ್ರಮವು ಕಳೆದ ಎರಡು ದಶಕಗಳಿಂದ ನಿರಂತರವಾಗಿ ಜ್ಞಾನದ ಬೆಳಕನ್ನು ಪಸರಿಸುತ್ತಾ ಬಂದಿದೆ. ಡಾ. ಗುರುರಾಜ ಕರಜಗಿ ಅವರ ಉಪನ್ಯಾಸವನ್ನು ಆಯೋಜಿಸುವ ಮೂಲಕ 250ನೇ ಕಂತನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಸ್ಮರಣೀಯವಾಗಿ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು, ಭಕ್ತರು, ಶಿಕ್ಷಕರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು," ಎಂದು ಸಲಹೆ ನೀಡಿದರು.
ಈ ಮಹತ್ವದ 250ನೇ ಕಾರ್ಯಕ್ರಮಕ್ಕೆ ಡಾ. ಗುರುರಾಜ ಕರಜಗಿ ಅವರು ಆಗಮಿಸಲು ಒಪ್ಪಿಗೆ ನೀಡಿರುವುದು ಸಭೆಯಲ್ಲಿ ಸಂತಸ ತಂದಿದ್ದು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸುವುದು, ಆಹ್ವಾನ ಹಾಗೂ ವೇದಿಕೆ ಸಿದ್ಧತೆಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಸಭೆಯಲ್ಲಿ ಮಠದ ಹಿತೈಷಿಗಳಾದ ತಿಮ್ಮಪ್ಪಯ್ಯ, ಆಶಾ ತಿಮ್ಮಪ್ಪಯ್ಯ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್, ಶ್ರೀಕಾಂತ್ ರಾವ್, ಡಾ. ನರಸಿಂಹನ್ ಸೇರಿದಂತೆ ಮಠದ ಭಕ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.