Kodagu

ಅ.4ರಂದು 2ನೇವರ್ಷದ ಕೆಸರುಗದ್ದೆ ಕ್ರೀಡಾಕೂಟ

admincoorgdaily

ಪರಮೇಶ್ವರ್
ಮಡಿಕೇರಿ: ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘ ಮತ್ತು ಮಹಿಳಾ ವೇದಿಕೆ, ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ಹಾಗೂ ವಿವಿಧ ಉಪಸಮಿತಿಗಳ ಸಂಯುಕ್ತಾಶ್ರಯದಲ್ಲಿ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾ ಕೂಟ ಅ.4 ರಂದು ಭಾನುವಾರ ಮೊಣ್ಣಂಗೇರಿಯ ಮರಾಟಿ ಸೋಮಪ್ಪ ಅವರ ಗದ್ದೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಾಭವಾನಿ ಸಂಘದ ಅಧ್ಯಕ್ಷ ಎಂ.ಕೆ. ಸಂತೋಷ್ ವಹಿಸಲಿದ್ದು, ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಮಡಿಕೇರಿ ತಾಲೂಕು ಸಂಘಟನಾ ಕಾರ್ಯದರ್ಶಿ ಎಂ.ಟಿ. ದೇವಪ್ಪ ಕಟ್ಟೆಮಾಡು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷ ಎಂ.ಎಂ. ಪರಮೇಶ್ವರ್, ಮಹಿಳಾ ವೇದಿಕೆ ಅಧ್ಯಕ್ಷೆ ಜಲಜಾ ನವೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ. ನರಸಿಂಹ, ಜಿಲ್ಲಾ ಕಾರ್ಯದರ್ಶಿ ಹೊವಮ್ಮ ಮತ್ತು ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್. ಯೋಗೇಂದ್ರ ಭಾಗವಹಿಸಲಿದ್ದಾರೆ.

ಕ್ರೀಡಾ ಕೂಟದಲ್ಲಿ 5 ರಿಂದ 10 ವರ್ಷದ ಮಕ್ಕಳಿಂದ 50 ವರ್ಷ ಮೇಲ್ಪಟ್ಟವರವರೆಗೆ ವಿವಿಧ ವಯೋಮಾನದವರಿಗೆ ಓಟದ ಸ್ಪರ್ಧೆ ನಡೆಯಲಿದೆ. ಜೊತೆಗೆ ವೇಗದ ನಡಿಗೆ, ಕಂಬ ಸುತ್ತಿ ಓಡುವುದು, ಮಡಿಕೆ ಹೊಡೆಯುವುದು, ಜೋಡಿ ಓಟ, ಹಗ್ಗ ಜಗ್ಗಾಟ (7 ಜನರ ತಂಡ), ಅಡಿಕೆ ಹಾಳೆ ಎಳೆಯುವುದು, ಹಿಮ್ಮುಖ ಓಟ, ಉಪ್ಪುಮೂಟೆ (ಬೆನ್ನಿನ ಮೇಲೆ ಓರ್ವ ವ್ಯಕ್ತಿಯನ್ನು ಹೊತ್ತು ಓಡುವುದು) ಓಟ ಮತ್ತು ಬೊಗಸೆಯಿಂದ ಕೆಸರು ತುಂಬಿಸುವ ಸ್ಪರ್ಧೆ ಸೇರಿದಂತೆ 14 ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾಧ್ಯಕ್ಷ ಎಂ.ಎಂ. ಪರಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜದ ಹಿರಿಯರಾದ ಮರಾಟಿ ಸೋಮಪ್ಪ ಉದ್ಘಾಟಿಸಲಿದ್ದು, ಕರ್ನಾಟಕ ಮರಾಟಿ ಒಕ್ಕೂಟ ಬೆಂಗಳೂರು ಅಧ್ಯಕ್ಷ ಕೆ. ಸುಂದರ ನಾಯ್ಕ, ಮೂಡಬಿದ್ರೆ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ, ಪುತ್ತೂರು ಕಾರ್ಯದರ್ಶಿ ವಾಸು ನಾಯ್ಕ, ಜಿಲ್ಲಾ ಉಪಾಧ್ಯಕ್ಷೆ ದೇವಕಿ ಜಿ.ಆರ್. ನಾಯ್ಕ ಸೇರಿದಂತೆ ಉಪಸಮಿತಿಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.