ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ 2ನೇ ವರ್ಷದ ನಾಟಿ ಕಾರ್ಯಕ್ರಮ
admincoorgdaily

ಶನಿವಾರಸಂತೆ : ನಾಟಿ ಕಾರ್ಯಕ್ರಮಗಳನ್ನು ವಿವಿಧ ಸಂಘಟನೆಗಳ ವತಿಯಿಂದ ಪ್ರತಿವರ್ಷ ಆಯೋಜಿಸುವ ಮೂಲಕ ಯುವಜನರಲ್ಲಿ ಕೃಷಿ ಮತ್ತು ನಾಟಿ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ಇಂತಹ ಕಾರ್ಯಕ್ರಮಗಳಿಂದ ಮುಂದಿನ ಪೀಳಿಗೆಗೆ ನಾಟಿ ಕಾರ್ಯದ ಮಹತ್ವ ತಿಳಿಯಲು ಸಾಧ್ಯವಾಗುತ್ತದೆ ಎಂದು ಸಿಗ್ಮಾ ನೆಟ್ವರ್ಕ್ ಸಂಸ್ಥಾಪಕ ಶರಣ್ ಪೂಣಚ್ಚ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಸಮೀಪದ ಆಲೂರೂ ಸಿದ್ದಾಪುರ ಕಡ್ಲೆಮಕ್ಕಿ ಕೃಷ್ಣಪ್ಪ ಅವರ ಗದ್ದೆಯಲ್ಲಿ 2ನೇ ವರ್ಷದ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗದ್ದೆ ನಾಟಿ ಮಾಡುವುದರಿಂದ ಭೂಮಿಯಲ್ಲಿ ನೀರಿನ ಮಟ್ಟ ಹೆಚ್ಚಲು ಸಹಕಾರಿಯಾಗುತ್ತದೆ. ಗದ್ದೆಯನ್ನು ಉಳುಮೆ ಮಾಡಿ ನಾಟಿ ಮಾಡುವುದರಿಂದ ಪ್ರಕೃತಿಗೂ ಅಪಾರ ಕೊಡುಗೆ ನೀಡಿದಂತಾಗುತ್ತದೆ ನಾನು ಸಹ ಸ್ವತಃ ಗದ್ದೆಯಲ್ಲಿ ಇಂದಿಗೂ ಭತ್ತ ಬೆಳೆಯುತ್ತಿದ್ದೇನೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕೊಡಗು ಹಿಂದೆ ಕೃಷಿ ಅವಲಂಬಿತ ಜಿಲ್ಲೆಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವನ್ಯಜೀವಿಗಳ ಹಾವಳಿ ಸೇರಿದಂತೆ ವಿವಿಧ ಕಾರಣಗಳಿಂದ ಜನರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಗದ್ದೆಗಳನ್ನು ತೋಟಗಳಾಗಿ ಪರಿವರ್ತಿಸುವ ಪ್ರವೃತ್ತಿಯೂ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜನರು ಸ್ವಯಂಪ್ರೇರಿತರಾಗಿ ನಾಟಿ ಕಾರ್ಯಕ್ಕೆ ಮುಂದಾಗಬೇಕು. ಯುವಜನತೆ ಇಂದು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸರ್ಕಾರವೂ ನಗರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಬೇಕು, ಕೊರೋನ ಸಮಯದಲ್ಲಿ ಪಟ್ಟಣದೆಡೆ ಮುಖ ಮಾಡಿದ್ದ ಯುವಕರು ಮತ್ತೆ ವಾಪಾಸಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು ನಂತರ ಇದೀಗ ಮತ್ತೆ ಪಟ್ಟಣದತ್ತ ಮುಖ ಮಾಡಿದ್ದು ಮತ್ತೆ ಭತ್ತದ ಗದ್ದೆಗಳು ಪಾಳು ಬೀಳುತ್ತಿದೆ ಎಂದರು.
ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಜಿತ್ ಕುಮಾರ್ ಗುಯ್ಯ ಮಾತನಾಡಿ ಜಿಲ್ಲೆಯಲ್ಲಿ ಪ್ರತಿವರ್ಷ ಭೂ ಕುಸಿತ ಹಾಗೂ ಪ್ರವಾಹ ಆಗುತ್ತಿದ್ದೂ ಇದಕ್ಕೆ ಕಾರಣ ಭತ್ತದ ಗದ್ದೆಗಳು ಪಾಳು ಬೀಳುತ್ತಿರುವುದು, ಈ ಹಿಂದೆ ಕಾಫಿ ತೋಟಗಳಲ್ಲಿ ನೀರು ಹಿಂಗು ಗುಂಡಿ ಮಾಡಿಸುತಿದ್ದರು ಆದರೆ ಅದು ಇದೀಗ ಮಾಯವಾಗಿದೆ ಮಳೆ ಬಂದ ನೀರು ಎಲ್ಲೂ ಸಂಗ್ರಹಣೆ ಆಗುತ್ತಿಲ್ಲ ಇದು ಭೂ ಕುಸಿತಕ್ಕೆ ಕಾರಣ ಹಾಗೂ ನಾಲೆಗಳಲ್ಲಿ ಬೇಸಿಗೆಯಲ್ಲಿ ಒಂದು ತೊಟ್ಟು ನೀರು ಹರಿಯುವುದಿಲ್ಲ ಭತ್ತದ ಗದ್ದೆಗಳು ಪಾಳು ಬೀಳದಂತೆ ನೋಡಿಕೊಳ್ಳಬೇಕಾಗಿದೆ.
ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವ ಕುಂಬೂರು ಮಾತನಾಡಿ ಸಂಘದಿಂದ ಬೇರೆಬೇರೆ ಈ ರೀತಿಯ ಕಾರ್ಯಕ್ರಮ ಹಾಕಿಕೊಳ್ಳುವ ಯೋಜನೆ ರೂಪಿಸಲಾಗಿದ್ದು, ಇಂತಹ ಕಾರ್ಯಕ್ರಮ ಮಾಡುವುದರಿಂದ ಕೃಷಿಕರಿಗೆ ಉತ್ತೇಜನ ನೀಡಿದಂತಾಗುತ್ತದೆ, ಇಂದು ಅನೇಕ ಮಕ್ಕಳಿಗೆ ಭತ್ತ ನಾಟಿಯಾ ಅರಿವು ಕಡಿಮೆ ಇರುತ್ತದೆ ಮಕ್ಕಳು ಪಠ್ಯದೊಂದಿಗೆ ಕೃಷಿ ಚಟುವಟಿಕೆಯಲ್ಲಿ ಮಕ್ಕಳು ಪಾಲ್ಗೊಳ್ಳಬೇಕು ಎಂದರು.
ನಾಟಿ ಕಾರ್ಯಕ್ರಮದಲ್ಲಿ ಸ್ಥಳೀಯ ಸರ್ಕಾರಿ ಶಾಲೆಯ ಹಾಗೂ ಐ ಟಿ ಐ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡು ನಾಟಿ ಕಾರ್ಯದಲ್ಲಿ ಭಾಗವಹಿಸಿದರು. ಇದೆ ಸಂದರ್ಭ ಗದ್ದೆ ಮಾಲೀಕ ಕೃಷ್ಣಪ್ಪ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಿರ್ದೇಶಕ ವಿಜಯ್ ಹಾನಗಲ್, ಜಿಲ್ಲಾ ಕಾರ್ಯದರ್ಶಿ ಚರಿಯಮನೆ ಸುರೇಶ್,. ಖಜಾಂಚಿ ಬಿ.ಎ. ಭಾಸ್ಕರ್, ಪ್ರೆಸ್ ಕ್ಲಬ್ ನಿರ್ದೇಶಕ ತೇಜಸ್ ಪಾಪಯ್ಯ, ಕಾರ್ಯದರ್ಶಿ ಭಾಸ್ಕರ್ ಮುಳ್ಳೂರು, ಲಕ್ಷ್ಮಿಕಾಂತ್ ಕೊಮಾರಪ್ಪ, ಹಿರಿಕರ ರವಿ ಹಾಗೂ ದಿನೇಶ್ ಮಾಲಂಬಿ ಮುಂತಾದವರಿದ್ದರು.