National News

ಮೈ ಮೇಲೆ ಮಲವಿಸರ್ಜನೆ ಮಾಡಿದ್ದಕ್ಕೆ 3 ವರ್ಷದ ಬಾಲಕನ ಹತ್ಯೆ; ತಾಯಿಯ ಪ್ರಿಯಕರನ ಬಂಧನ

admincoorgdaily

Baby

ಮುಂಬೈ, ಡಿ 23: ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮಲಗಿದ್ದ ವೇಳೆ ಆಕಸ್ಮಿಕವಾಗಿ ತನ್ನ ಬಟ್ಟೆಯ ಮೇಲೆ ಮಲವಿಸರ್ಜನೆ ಮಾಡಿದ ಕಾರಣಕ್ಕೆ ಕೋಪಗೊಂಡ ತಾಯಿಯ ಪ್ರಿಯಕರನೊಬ್ಬ 3 ವರ್ಷದ ಬಾಲಕನನ್ನು ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ನಡೆದಿದೆ. 

ಡಿಸೆಂಬರ್ 11ರ ರಾತ್ರಿ ಈ ಘಟನೆ ನಡೆದಿದ್ದು, 44 ವರ್ಷದ ಮೌಲಾಲಿ ಅಲಿಯಾಸ್ ಅಕ್ಬರ್ ರಜಾಕ್ ಎಂಬಾತ ಮದ್ಯಪಾನದ ಅಮಲಿನಲ್ಲಿ ಬಾಲಕ ಫರ್ಹಾನ್‌ನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ತಾಯಿ 28 ವರ್ಷದ ಶಹನಾಜ್ ಶೇಖ್ ಕೆಲಸಕ್ಕೆ ಹೊರಗಿದ್ದ ವೇಳೆ, ಆರೋಪಿ ಮತ್ತು ಮಗು ಒಂದೇ ಕೋಣೆಯಲ್ಲಿ ಮಲಗಿದ್ದರು. ಈ ಸಂದರ್ಭದಲ್ಲಿ ಮಗು ಮಲವಿಸರ್ಜನೆ ಮಾಡಿದ್ದು, ಇದರಿಂದ ಕೋಪಗೊಂಡ ಆರೋಪಿ ಮಗುವನ್ನು ಹೊಡೆದು ಕತ್ತು ಹಿಸುಕಿದ್ದಾನೆ ಎನ್ನಲಾಗಿದೆ.

ಮನೆಗೆ ಮರಳಿದ ಶಹನಾಜ್‌ಗೆ ‘ಮಗು ಮೇಲಿಂದ ಬಿದ್ದಿದೆ’ ಎಂದು ಆರೋಪಿ ಹೇಳಿದ್ದಾನೆ. ಆ ಮಾತನ್ನು ನಂಬಿದ ಆಕೆ ಮಗುವನ್ನು ಮೊದಲು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಅಲ್ಲಿನ ವೈದ್ಯರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಬಳಿಕ ಆಕೆ ಮಗುವನ್ನು ಕರ್ನಾಟಕದ ವಿಜಯಪುರಕ್ಕೆ ಕರೆದೊಯ್ದಳು. ಈ ವೇಳೆ ಬಸ್ ನಿಲ್ದಾಣದ ಬಳಿ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನಂತರ ಶಹನಾಜ್ ತನ್ನ ಮೊದಲ ಪತಿಯ ಸಹಾಯದಿಂದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಆಗಲೇ ಮಗು ಮೃತಪಟ್ಟಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿದ ಪರಿಣಾಮ ಮಗು ಸಾವನ್ನಪ್ಪಿರುವುದು ದೃಢಪಟ್ಟಿದೆ. ಇದಾದ ಬಳಿಕ ಶಹನಾಜ್ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಮೌಲಾಲಿಯನ್ನು ಬಂಧಿಸಿದ್ದಾರೆ.

ಶಹನಾಜ್‌ಗೆ ಮೊದಲ ಮದುವೆಯಿಂದ ಇಬ್ಬರು ಮಕ್ಕಳು ಇದ್ದು, ಆಕೆ ಮತ್ತು ಆರೋಪಿ ಇಬ್ಬರೂ ವಿಜಯಪುರದವರು. ಕಳೆದ ಒಂದು ತಿಂಗಳಿನಿಂದ ಸೊಲ್ಲಾಪುರದಲ್ಲಿ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು. ವಿಚಾರಣೆ ವೇಳೆ ಆರೋಪಿ ಅಪರಾಧ ಒಪ್ಪಿಕೊಂಡಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.