ನ.30ರಂದು ಶ್ರೀ ಬೀರಲಿಂಗೇಶ್ವರ ಪರಿವಾರ ದೇವರ 8ನೇ ವರ್ಷದ ಪೂಜಾ ವಾರ್ಷಿಕೋತ್ಸವ
admincoorgdaily

ಶನಿವಾರಸಂತೆ: ಸ್ಥಳೀಯ ಶ್ರೀ ಬೀರಲಿಂಗೇಶ್ವರ, ಪ್ರಬಲ ಭೈರವಿ ಹಾಗೂ ಪರಿವಾರ ದೇವರುಗಳ 8ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ನವೆಂಬರ್ 30ರಂದು ಸೋಮವಾರ ನಡೆಯಲಿದೆ ಎಂದು ಪರಿವಾರ ದೇವರ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಸೋಮವಾರ ಬೆಳಗ್ಗೆ 5.30 ಗಂಟೆಗೆ ಗಂಗಾಪೂಜೆ, ಗೋಪೂಜೆ, ಮಂಗಳಾರತಿ ನಂತರ ಪಟ್ಟಣದ ಸಹಕಾರ ಬ್ಯಾಂಕ್ ಹತ್ತಿರದಿಂದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಕಳಸ ಕುಂಭ ಮೆರವಣಿಗೆ ನಡೆಯುತ್ತದೆ.
ಬೆಳಗ್ಗೆ 7 ಗಂಟೆಗೆ ಶ್ರೀ ಗಣಪತಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾ ಸಂಕಲ್ಪ, ಬೆಳಗ್ಗೆ 7.30ಕ್ಕೆ ಊರೊಡೆಯ ಗುಡಿಯಲ್ಲಿ ದೇವರಿಗೆ ಮಹಾಪೂಜೆ, ಮಹಾ ಮಂಗಳಾರತಿ ಮತ್ತು ಉಪಹಾರ ವಿನಿಯೋಗ, ಬೆಳಗ್ಗೆ 9 ಗಂಟೆಗೆ ಬ್ರಹ್ಮದೇವರಿಗೆ ವಿಶೇಷ ಪೂಜೆ, ಬೆಳಗ್ಗೆ 9.30ಕ್ಕೆ ಬಿದರೂರು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜಾ ಕಾರ್ಯ, ಬೆಳಗ್ಗೆ 10 ಗಂಟೆಗೆ ಹೆಮ್ಮನೆ ಗ್ರಾಮದ ಮಾರಮ್ಮ, ಊರೊಡೆಯ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಬೆಳಗ್ಗೆ 11 ಗಂಟೆಗೆ ತ್ಯಾಗರಾಜ ಕಾಲೋನಿಯಲ್ಲಿ ಶ್ರೀ ಚೌಡೇಶ್ವರಿ ಬನದಲ್ಲಿ ದೇವಿಗೆ ವಿಶೇಷ ಪೂಜೆ ಮತ್ತು 11.30ಕ್ಕೆ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ದೇವರಿಗೆ ಮಹಾಪೂಜೆ ನಡೆಯುತ್ತದೆ.
ಮಧ್ಯಾಹ್ನ 12 ಗಂಟೆಗೆ ಬನ್ನಿ ಮಂಟಪದಲ್ಲಿ ಮಹಾಪೂಜೆ, ಮಧ್ಯಾಹ್ನ 12.30 ಗಂಟೆಗೆ ಶ್ರೀರಾಮ ಮಂದಿರದಲ್ಲಿ ದೇವರಿಗೆ ಮಹಾಪೂಜೆ ನೆರವೇರುತ್ತದೆ. ಮಧ್ಯಾಹ್ನ 1 ಗಂಟೆಗೆ ಮುಖ್ಯ ರಸ್ತೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ 1.30ಕ್ಕೆ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವರಿಗೆ ಮಹಾಪೂಜೆ ನೆರವೇರಿಸಲಾಗುತ್ತದೆ. ತದನಂತರ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ದಾಸೋಹ ನೆರವೇರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಸಂಜೆ 5 ಗಂಟೆಯಿಂದ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ಸನ್ನಿಧಿಯಲ್ಲಿ ದೀಪಾರಾಧನೆ, ಗಣಪತಿ ಪೂಜೆ, ಪಂಚಗವ್ಯ, ಪುಣ್ಯಾಹ, ದೇವನಾಂದಿ, ನವಗ್ರಹ ಮತ್ತು ಮೃತ್ಯುಂಜಯ ಪೂಜೆ, ನವಗ್ರಹ ಮತ್ತು ಮೃತ್ಯುಂಜಯ ಹೋಮ, ಗಣಪತಿ ಹೋಮ, ಧನ್ವಂತರಿ ಹೋಮ, ಮೂಲ ದೇವರಿಗೆ ಫಲ-ಪಂಚಾಮೃತ ಅಭಿಷೇಕ, ಏಕವಾರ ರುದ್ರಾಭಿಷೇಕ, ಮಹಾಬಲಿ, ಮಹಾಪೂಜೆ, ಮಹಾ ಮಂಗಳಾರತಿ ನಂತರ ತೀರ್ಥ ಪ್ರೋಕ್ಷಣೆ ಮುಂತಾದ ವಿಧಿ ವಿಧಾನಗಳು ನೆರವೇರಿಸಲಾಗುತ್ತದೆ ಎಂದು ಶ್ರೀ ಬೀರಲಿಂಗೇಶ್ವರ ದೇವರ ಸಮಿತಿ ಆಡಳಿತ ಮಂಡಳಿಯವರು ತಿಳಿಸಿದರು.