ನ.26ರಂದು 36ನೇ ವಾರ್ಷಿಕ ಕೊಡವ ನ್ಯಾಷನಲ್ ಡೇ ಆಚರಣೆ
admincoorgdaily

ಮಡಿಕೇರಿ ನ.17 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಭಾರತದ ಸಂವಿಧಾನ ದಿನದ ಅಂಗವಾಗಿ 36ನೇ ವಾರ್ಷಿಕ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮವನ್ನು ನ.26ರಂದು ಮಡಿಕೇರಿಯ ಹೊರವಲಯದಲ್ಲಿರುವ ಕ್ಯಾಪಿಟಲ್ ವಿಲೇಜ್ನಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಮಾನವ ಶಾಸ್ತ್ರ ವಿಜ್ಞಾನಿ ಪ್ರೊ. ಡಾ.ಎಂ.ಎ.ಕಲಾ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಕಲಾಂ ಅವರು ಕೊಡವರ ವಂಶಾವಳಿ, ಕುಟುಂಬ ರಚನೆ ಮತ್ತು ವಿಶಿಷ್ಟ ಭೂ ಹಿಡುವಳಿ ಕುರಿತಂತೆ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದಿದ್ದು, ಮಾನವಶಾಸ್ತ್ರ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯ ಸೇರಿದಂತೆ ದೇಶದ ವಿವಿಧ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಉನ್ನತ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮಾನವ ವಲಸೆ, ಜನಾಂಗೀಯತೆ, ಅಲ್ಪಸಂಖ್ಯಾತರ ಹಕ್ಕುಗಳು, ಧಾರ್ಮಿಕ ಮತಾಂತರಗಳು, ಅರಣ್ಯ ನೀತಿಗಳು ಮತ್ತು ದೇವರ ಕಾಡುಗಳ ಕುರಿತ ಸಂಶೋಧನೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಅವರು, ಕೊಡವರ ವಿಶಿಷ್ಟ ಜನಾಂಗೀಯ ಗುರುತು ಮತ್ತು ಆದಿಮಸಂಜಾತ ಪ್ರಕೃತಿ ಆರಾಧಕ ಪರಂಪರೆಯ ಕುರಿತು ಅಧ್ಯಯನ ನಡೆಸಿದ್ದಾರೆ.
ಕೊಡವರು ಏಕ ಜನಾಂಗೀಯ ಸಮುದಾಯವಾಗಿದ್ದು, ಅವರಿಗೆ ರಾಷ್ಟ್ರೀಯ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಮತ್ತು ಕಾಲಂ ನೀಡಬೇಕು ಎಂಬ ನಿಲುವನ್ನು ಪ್ರೊ. ಡಾ.ಎಂ.ಎ.ಕಲಾ ಪ್ರತಿಪಾದಿಸಿದ್ದಾರೆ. ಕೊಡವರ ವಿಶಿಷ್ಟ ಜನಾಂಗೀಯ, ಸಾಂಸ್ಕೃತಿಕ ಮತ್ತು ಪ್ರಕೃತಿ ಆರಾಧಕ ಪರಂಪರೆಯನ್ನು ಸಂವಿಧಾನದ ಅಡಿಯಲ್ಲಿ ಗುರುತಿಸಿ ರಕ್ಷಿಸಬೇಕೆಂಬ ಆಶಯವನ್ನು ಅವರು ಹೊಂದಿದ್ದಾರೆ. ಆದ್ದರಿಂದ ಕೊಡವ ಸಮಾಜ ಬಾಂಧವರು ಅವರ ವಿಚಾರಧಾರೆ ಮತ್ತು ಬೌದ್ಧಿಕ ಪ್ರಖರತೆಯನ್ನು ಆಲಿಸಬೇಕೆಂದು ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.
ಭಾರತದ ಸಂವಿಧಾನದ ಆಶಯಗಳ ಅಡಿಯಲ್ಲಿ ಕೊಡವಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ ಮತ್ತು ಸ್ವಯಂ ನಿರ್ಣಯದ ಹಕ್ಕುಗಳಿಗಾಗಿ ಸಿಎನ್ಸಿ ದೀರ್ಘಕಾಲದಿಂದ ಹೋರಾಟ ನಡೆಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಕೊಡವರ ಹತ್ತು ನ್ಯಾಯಸಮ್ಮತ ಆಕಾಂಕ್ಷೆಗಳು ಹಾಗೂ ಗೌರವಾನ್ವಿತ ಗುರಿಗಳನ್ನು ಪುನರುಚ್ಚರಿಸುವ ಉದ್ದೇಶದಿಂದ ಸಂವಿಧಾನ ದಿನದಂದೇ ಕೊಡವ ನ್ಯಾಷನಲ್ ಡೇ ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕರ್ನಾಟಕ ಹೈಕೋರ್ಟ್ ಕೊಡವ ಎಂಬ ನಾಮಕರಣದ ಮಹತ್ವವನ್ನು ಎತ್ತಿಹಿಡಿದಿದೆ. ಈ ವಿಚಾರವು ಭವಿಷ್ಯದಲ್ಲಿ ರಾಷ್ಟ್ರೀ ಜನಗಣತಿಯಲ್ಲಿ ಪ್ರತ್ಯೇಕ ಗುರುತಿನ ದಾಖಲಾತಿ, ಯುಎನ್ಡಿಆರ್ಐಪಿ ಹಾಗೂ ಸಂವಿಧಾನದ ಐದನೇ ಮತ್ತು ಆರನೇ ಅನುಸೂಚಿಗಳ ಅಡಿಯಲ್ಲಿ ರಕ್ಷಣೆ ಹಾಗೂ ಕೊಡವಲ್ಯಾಂಡ್ ಸ್ವಾಯತ್ತತೆಯ ಹಕ್ಕೊತ್ತಾಯಕ್ಕೆ ಆಧಾರವಾಗಲಿದೆ. ಕೊಡವರ ಇತಿಹಾಸ ಮತ್ತು ಸಂಸ್ಕೃತಿಯ ಕುರಿತು ಲಭ್ಯವಿರುವ ಐತಿಹಾಸಿಕ ದಾಖಲೆಗಳು, ಸಂಶೋಧನಾ ಕೃತಿಗಳು ಹಾಗೂ ಸಾಹಿತ್ಯಿಕ ಉಲ್ಲೇಖಗಳ ಸಮಗ್ರ ಅಧ್ಯಯನ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
36ನೇ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಕೊಡವರ ಇತಿಹಾಸ, ಜನಾಂಗೀಯ ಅಸ್ಮಿತೆ, ಸಂವಿಧಾನಾತ್ಮಕ ಹಕ್ಕುಗಳು ಮತ್ತು ಸ್ವಾಯತ್ತತೆಯ ಬೇಡಿಕೆಗಳು ಸೇರಿದಂತೆ ಪ್ರಮುಖ ವಿಚಾರಗಳು ಚರ್ಚೆಯಾಗಲಿವೆ ಎಂದು ಎನ್.ಯು.ನಾಚಪ್ಪ ಕೊಡವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.