ಮೇ 30ರಿಂದ 3ನೇ ಹಂತದ SIR: ಕರ್ನಾಟಕ ಸೇರಿ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ

ಮೇ 30ರಿಂದ 3ನೇ ಹಂತದ SIR: ಕರ್ನಾಟಕ ಸೇರಿ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ

ನವದೆಹಲಿ, ಮೇ 14: ಕರ್ನಾಟಕ ಸೇರಿದಂತೆ 16 ರಾಜ್ಯಗಳು, ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲು ಚುನಾವಣಾ ಆಯೋಗ ಆದೇಶಿಸಿದೆ. ದೇಶದಲ್ಲಿ 3ನೇ ಹಂತದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮೇ 30ರಿಂದ ಆರಂಭವಾಗಲಿದ್ದು, ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳು ನೇಮಿಸಿರುವ 3.42 ಲಕ್ಷ ಬೂತ್ ಮಟ್ಟದ ಏಜೆಂಟ್‌ಗಳ ಸಹಾಯದಿಂದ 36.73 ಕೋಟಿ ಮತದಾರರನ್ನು ಮನೆಮನೆಗೆ ತೆರಳಿ ಪರಿಶೀಲಿಸುವ ಕಾರ್ಯ ನಡೆಯಲಿದೆ.

ಒಡಿಶಾ, ಮಿಜೋರಾಂ, ಸಿಕ್ಕಿಂ, ಮಣಿಪುರ, ದಾದ್ರಾ ನಗರ ಹವೆಲಿ ಮತ್ತು ದಮನ್ ದಿಯು, ಉತ್ತರಾಖಂಡ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಹರಿಯಾಣ, ಚಂಡೀಗಢ, ತೆಲಂಗಾಣ, ಪಂಜಾಬ್, ಕರ್ನಾಟಕ, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್, ದೆಹಲಿ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಸೇರಿದಂತೆ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ SIR ನಡೆಯಲಿದೆ.

ಕರ್ನಾಟಕದಲ್ಲಿ ಯಾವಾಗ?

ಕರ್ನಾಟಕಕ್ಕೆ ಅಕ್ಟೋಬರ್ 1 ಅನ್ನು ಅರ್ಹತಾ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಜೂನ್ 20ರಿಂದ 29ರವರೆಗೆ ನಮೂನೆಗಳ ಸಿದ್ಧತೆ, ತರಬೇತಿ ಮತ್ತು ಮುದ್ರಣ ನಡೆಯಲಿದ್ದು, ಜೂನ್ 30ರಿಂದ ಜುಲೈ 29ರವರೆಗೆ BLOಗಳು ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಆಗಸ್ಟ್ 5ರಿಂದ ಸೆಪ್ಟೆಂಬರ್ 3ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಇವುಗಳ ವಿಲೇವಾರಿ ಪ್ರಕ್ರಿಯೆ ಅಕ್ಟೋಬರ್ 3ರವರೆಗೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 7ರಂದು ಪ್ರಕಟವಾಗಲಿದೆ.

ಮೊದಲ ಎರಡು ಹಂತಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ 13 ಕಡೆ SIR ಪೂರ್ಣಗೊಂಡಿದ್ದು, ಸುಮಾರು 5.18 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಇದಕ್ಕೆ ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಈ ಪ್ರಕ್ರಿಯೆ ಮತದಾರರನ್ನು ಹೊರಗಿಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದವು. ಕಾನೂನು ಸಂಬಂಧಿತ ಸಮಸ್ಯೆಗಳ ಕಾರಣ ಅಸ್ಸಾಂನಲ್ಲಿ SIR ನಡೆಸಲಾಗಿಲ್ಲ ಎಂಬುದಿಲ್ಲಿ ಗಮನಾರ್ಹ.