Kodagu

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 41 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಾಚರಣೆ

admincoorgdaily

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 41 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಾಚರಣೆ
ಮಡಿಕೇರಿ ಸೆ.07:-ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಸಹಯೋಗದಲ್ಲಿ 41 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಮುಖ್ಯ ಆಡಳಿತಾಧಿಕಾರಿ ರೋಹಿಣಿ, ವೈದ್ಯಕೀಯ ಅಧೀಕ್ಷಕರಾದ ಡಾ.ಸೋಮಶೇಖರ್, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಡಾ.ಸನತ್ ಕುಮಾರ್, ಆರ್‍ಎಂಒ ಡಾ.ಅಭಿನಂದನ್. ಬಿ, ನೇತ್ರ ವಿಭಾಗದ ಮುಖ್ಯಸ್ಥೆ ಡಾ.ಕೃಪಾಲಿನಿ ಅಯ್ಯಪ್ಪ, , ಸೋಟ್ಟೋ ನೋಡಲ್ ಅಧಿಕಾರಿ ಡಾ.ನಿಶೀದ್ ಜೋಸೆಫ್, ಅಕಾಡೆಮಿಕ್ ರಿಜಿಸ್ಟ್ರಾರ್ ಡಾ.ರವಿಕಿರಣ್ ಕಿಸಾನ್, ಇಎನ್‍ಟಿ ವಿಭಾಗದ ಮುಖ್ಯಸ್ಥೆ ಡಾ.ಶ್ವೇತಾ ಹಾಗೂ ಸಹ ಪ್ರಾಧ್ಯಾಪಕ ಡಾ. ಸತ್ಯಕಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್ ಅವರು ನೇತ್ರದಾನದ ಮಹತ್ವ ಮತ್ತು ಇಂತಹ ಜಾಗೃತಿ ಕಾರ್ಯಕ್ರಮಗಳ ಅಗತ್ಯತೆಯ ಕುರಿತು ತಿಳಿಸಿದರು. ಮುಖ್ಯ ಆಡಳಿತಾಧಿಕಾರಿ ರೋಹಿಣಿ ಅವರು ಪ್ರತಿವರ್ಷ ಆಗಸ್ಟ್ 25 ರಿಂದ ಸೆಪ್ಟೆಂಬರ್ 8 ರವರೆಗೆ ನೇತ್ರದಾನ ಪಾಕ್ಷಿಕವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. 

ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್ ಅವರು ಕಣ್ಣಿನ ದಾನ ಮಾತ್ರವಲ್ಲದೆ ಅಂಗಾಂಗ ದಾನವು ಅನೇಕ ಜೀವಗಳಿಗೆ ಹೊಸ ಆಶಾಕಿರಣವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ.ಸನತ್ ಕುಮಾರ್ ಅವರು ಪ್ರತಿಯೊಬ್ಬರೂ ನೇತ್ರದಾನದ ಪ್ರತಿಜ್ಞೆ ಕೈಗೊಂಡು ಅದರ ಮಹತ್ವವನ್ನು ತಮ್ಮ ಕುಟುಂಬ ಹಾಗೂ ಬಂಧುಗಳಿಗೂ ತಿಳಿಸಬೇಕೆಂದು ಕರೆ ನೀಡಿದರು. 
ಅಕಾಡೆಮಿಕ್ ರಿಜಿಸ್ಟ್ರಾರ್ ಡಾ.ರವಿಕಿರಣ್ ಕಿಸಾನ್ ಅವರು ಕೇವಲ ಒಂದು ನಿಮಿಷ ಕಣ್ಣು ಮುಚ್ಚಿಕೊಂಡಿರುವುದೇ ಕಷ್ಟಕರವಾದಾಗ, ದೃಷ್ಟಿಯನ್ನು ಕಳೆದುಕೊಂಡವರ ಜೀವನದ ಸಂಕಷ್ಟವನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ನೇತ್ರ ವಿಭಾಗದ ಮುಖ್ಯಸ್ಥೆ ಡಾ.ಕೃಪಾಲಿನಿ ಅಯ್ಯಪ್ಪ ಅವರು ಭಾರತದಲ್ಲಿ ಕಾರ್ನಿಯ ಅಂಧತ್ವದ ಪ್ರಮಾಣ ಮತ್ತು ಅದರ ಹೊರೆಯ ಕುರಿತು ವಿವರಿಸಿದರು. 

ಒಬ್ಬ ವ್ಯಕ್ತಿಯ ನೇತ್ರದಾನದಿಂದ ಇಬ್ಬರು ಕಾರ್ನಿಯ ಅಂಧತ್ವದ ವ್ಯಕ್ತಿಗಳಿಗೆ ದೃಷ್ಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದ ಅವರು, ಪ್ರತಿಯೊಂದು ಕುಟುಂಬವೂ ನೇತ್ರದಾನವನ್ನು ಕುಟುಂಬದ ಒಂದು ಉತ್ತಮ ಸಂಪ್ರದಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನೇತ್ರದಾನ ಪಾಕ್ಷಿಕಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ನೇತ್ರಾಧಿಕಾರಿ ಶ್ರೀಮತಿ ಕಾವ್ಯ ನಿರೂಪಿಸಿದರು. ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಡಾ. ಶಿವಪ್ರಸನ್ನ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಡೀನ್ ಹಾಗೂ ನಿರ್ದೇಶಕರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ನಿಶಾ, ನೇತ್ರಾಧಿಕಾರಿ ಚೇತನ್, ರಾಘವೇಂದ್ರ,  ಯಜ್ಞ ಪೂಜಾರಿರ, ಸಿಸ್ಟಮ್ ಎಂಜಿನಿಯರ್ ಅಪ್ಪಯ್ಯ, ಅಮಿತಾ, ಡಿಇಒ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಡಿಇಒ ಕೌಶಿ ಸೇರಿದಂತೆ ಎಂಬಿಬಿಎಸ್ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ನೇತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಕಿರಣ್ ಭಟ್ ಅವರು ಗಣ್ಯರನ್ನು ಸ್ವಾಗತಿಸಿದರು.