450 ಕೆಜಿ ಗಾಂಜಾ, 43 ಕೆಜಿ MDMA ಸುಟ್ಟು ಭಸ್ಮ
ಮಂಗಳೂರು(ದಕ್ಷಿಣ ಕನ್ನಡ): ಮಾದಕ ದ್ರವ್ಯ ಮುಕ್ತ ಮಂಗಳೂರು ನಿರ್ಮಾಣದ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಸುಮಾರು ರೂ 82 ಕೋಟಿ ಮೌಲ್ಯದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ಬುಧವಾರ ವೈಜ್ಞಾನಿಕವಾಗಿ ನಾಶಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ 11 ಗಂಟೆಗೆ ಮಂಗಳೂರು ನಗರದ ಮುಲ್ಕಿ ಬಳಿಯ ಕೊಳ್ನಾಡು ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ 'ರಾಮ್ಕಿ ಎನರ್ಜಿ ಅಂಡ್ ಎನ್ವಿರಾನ್‌ಮೆಂಟ್ ಲಿಮಿಟೆಡ್' ಸಂಸ್ಥೆಯ ಘಟಕದಲ್ಲಿ 'ಡ್ರಗ್ ಡಿಸ್ಪೋಸಲ್ ಕಮಿಟಿ' ಸಮಕ್ಷಮ ಪರಿಸರ ಸ್ನೇಹಿ ಹಾಗೂ ವೈಜ್ಞಾನಿಕ ವಿಧಾನದಲ್ಲಿ ಈ ವಿಲೇವಾರಿ ಪ್ರಕ್ರಿಯೆ ನೆರವೇರಿತು
ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ 16 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 59 ಎನ್.ಡಿ.ಪಿ.ಎಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪ್ತಿ ಮಾಡಲಾಗಿದ್ದ ಮಾದಕ ವಸ್ತುಗಳನ್ನು ಈ ಸಂದರ್ಭದಲ್ಲಿ ನಾಶ ಮಾಡಲಾಯಿತು.
ನಾಶಪಡಿಸಲಾದ ಮಾದಕ ದ್ರವ್ಯಗಳ ವಿವರ:
ಗಾಂಜಾ: 450 ಕೆ.ಜಿ
ಎಂ.ಡಿ.ಎಂ.ಎ (MDMA): 43 ಕೆ.ಜಿ 260 ಗ್ರಾಂ
ಹೈಡ್ರೋ ವೀಡ್ ಗಾಂಜಾ: 880 ಗ್ರಾಂ
ಭಾಂಗ್: 1 ಕೆ.ಜಿ 200 ಗ್ರಾಂ
ಚರಸ್: 80 ಗ್ರಾಂ
(ಒಟ್ಟು ಅಂದಾಜು ಮೌಲ್ಯ: ರೂ 82 ಕೋಟಿ)
ಮಂಗಳೂರು ಪೂರ್ವ ಠಾಣೆ (2024): ದಾಖಲಾಗಿದ್ದ ಬೃಹತ್ ಪ್ರಕರಣಕ್ಕೆ ಸಂಬಂಧಿಸಿದ ರೂ 75 ಕೋಟಿ ಮೌಲ್ಯದ 37 ಕೆಜಿಎಂಡಿಎಂಎ.
ಮುಲ್ಕಿ ಪೊಲೀಸ್ ಠಾಣೆ (2025): ದಾಖಲಾಗಿದ್ದ ಪ್ರಕರಣದ ಸುಮಾರು ರೂ 4.47 ಕೋಟಿ ಮೌಲ್ಯದ 4 ಕೆ.ಜಿ ಎಂಡಿಎಂಎ.
ಕೊಣಾಜೆ ಪೊಲೀಸ್ ಠಾಣೆ: ವಶಪಡಿಸಿಕೊಂಡಿದ್ದ ರೂ 20 ಲಕ್ಷ ಮೌಲ್ಯದ 106 ಕೆ.ಜಿ ಗಾಂಜಾ.
ಮೂಡಬಿದಿರೆ ಪೊಲೀಸ್ ಠಾಣೆ: ಜಪ್ತಿ ಮಾಡಿದ್ದ ರೂ 36 ಲಕ್ಷ ಮೌಲ್ಯದ 111 ಕೆ.ಜಿ ಗಾಂಜಾ.
2026ನೇ ಸಾಲಿನಲ್ಲಿ ಇದುವರೆಗೆ ಮಂಗಳೂರು ನಗರ ಪೊಲೀಸರು ಮಾದಕ ದ್ರವ್ಯ ಜಾಲದ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ದಾಖಲಾದ ಎನ್ಡಿಪಿಎಸ್ ಪ್ರಕರಣಗಳು 87 ಆಗಿದ್ದು, 157 ಪೆಡ್ಲರ್‌ಗಳನ್ನು ಬಂಧಿಸಲಾಗಿತ್ತು. ಇವರಿಂದ ರೂ 8,18,30,130 ಮೌಲ್ಯದ 148 ಕೆ.ಜಿ 615 ಗ್ರಾಂ ಗಾಂಜಾ, 7 ಕೆ.ಜಿ 165 ಗ್ರಾಂ ಎಂಡಿಎಂಎ, 1 ಕೆ.ಜಿ 705 ಗ್ರಾಂ ಹೈಡ್ರೋ ವೀಡ್ ಗಾಂಜಾ ವಶಪಡಿಸಲಾಗಿತ್ತು. ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ 463 ವ್ಯಕ್ತಿಗಳ ವಿರುದ್ಧ ಒಟ್ಟು 356 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಮಾದಕ ದ್ರವ್ಯ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಮಾದಕ ವಸ್ತು ಮಾರಾಟ ಅಥವಾ ಸೇವನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಪೊಲೀಸ್ ಇಲಾಖೆ ಸೃಜಿಸಿರುವ ಕ್ಯೂಆರ್ ಕೋಡ್ ಮೂಲಕ ಅಥವಾ ಪೊಲೀಸ್ ಕಂಟ್ರೋಲ್ ರೂಮ್ 112 / 9480802321 ಸಂಖ್ಯೆಗೆ ಮಾಹಿತಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
