48ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವ: 5ನೇ ದಿನ ಕಾಡಗಗ್ಗರ ನಾಟಕಕ್ಕೆ ಭಾರಿ ಮೆಚ್ಚುಗೆ
admincoorgdaily

ಪೊನ್ನಂಪೇಟೆ, ಅ.16: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾಡಳಿತ ಹಾಗೂ ಶ್ರೀ ಕಾವೇರಿ ದಸರಾ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ 48ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವದ ಐದನೇ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು.
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ವತಿಯಿಂದ ಜನಪದ ಗೀತೆ, ಭಾವಗೀತೆ ಹಾಗೂ ರಂಗಗೀತೆಗಳ ಗಾಯನ ನಡೆಯಿತು. ಕುಶಾಲನಗರದ ಕು. ಅಭಿತ್ ಮತ್ತು ತಂಡದವರ ನೃತ್ಯ ವೈಭವ, ಪೊನ್ನಂಪೇಟೆಯ ನಾದ ನೃತ್ಯ ನಾಟ್ಯ ಶಾಲೆಯ ನೃತ್ಯ ಪ್ರದರ್ಶನ ಹಾಗೂ ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯದ ಕಲಾವಿದರ ಶಾಸ್ತ್ರೀಯ ನೃತ್ಯ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ರಾತ್ರಿ ಮಂಗಳೂರಿನ ಪ್ರಸಿದ್ಧ ವಜ್ರದಂತ ಕಲಾವಿದೆರ್ ಕುಡ್ಲ ತಂಡದ ವತಿಯಿಂದ ‘ಕಾಡಗಗ್ಗರ’ ಎಂಬ ರೋಮಾಂಚಕಾರಿ ನಾಟಕ ಪ್ರದರ್ಶನಗೊಂಡಿತು. ಕಾಂತಾರ ಚಿತ್ರದ ಗುರುವ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ಸ್ವರಾಜ್ ಶೆಟ್ಟಿ ಹಾಗೂ ಶ್ವೇತಾ ಅರೆಹೊಳೆ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ನಾಟಕಕ್ಕೆ ವಿಶೇಷ ಮೆರುಗು ನೀಡಿತು.
ಎರಡು ವರ್ಷಗಳ ಹಿಂದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿದ್ದ ‘ಕಾಂತಾರ’ ಚಿತ್ರದ ರೀತಿಯ ಕಥಾ ಲೋಕವನ್ನು ಮತ್ತೊಮ್ಮೆ ಕಣ್ಮುಂದೆ ತಂದ ಅನುಭವವನ್ನು ‘ಕಾಡಗಗ್ಗರ’ ನಾಟಕ ನೀಡಿತು. ನಾಟಕದ ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡ ಕಲಾವಿದರ ಅಭಿನಯ, ರೋಚಕ ನಿರೂಪಣೆ ಹಾಗೂ ರಂಗಪ್ರಸ್ತುತಿ ಗಮನ ಸೆಳೆದವು. ಕೀರ್ತನ್ ಭಂಡಾರಿ ರಚನೆ, ಸ್ವರಾಜ್ ಶೆಟ್ಟಿ ನಿರ್ದೇಶಿಸಿ ರತ್ನ ಕೇತುವಾಗಿ ಸ್ವತಃ ಮುಖ್ಯ ಪಾತ್ರದಲ್ಲಿ ಅಮೋಘವಾಗಿ ನಟಿಸಿ ನೂರಾರು ಪ್ರೇಕ್ಷಕರನ್ನು ಕೊನೆಯವರೆಗೂ ಆಸಕ್ತಿಯಿಂದ ವೀಕ್ಷಿಸುವಂತೆ ಮಾಡಿದ್ದು ವಿಶೇಷವಾಗಿತ್ತು.
ದಿನಾಂಕ 17 ರ ಕಾರ್ಯಕ್ರಮ:
ಶನಿವಾರ ಮತ್ತು ಭಾನುವಾರ ಶಿವಾಜಿ ಯುವ ಸೇನೆ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ, ಗೋಣಿಕೊಪ್ಪದ ವೆಸ್ಟರ್ನ್ ಡಾನ್ಸ್ - ಐಕಿಯಾ ಏಮ್ ಹೈ ಡಾನ್ಸ್ ಸ್ಟುಡಿಯೋ ಮತ್ತು ವಿರಾಜಪೇಟೆಯ ಇಂಟೋಪೀಸ್ ಡಾನ್ಸ್ ಟೀಂ ಹಾಗೂ ಸುಳ್ಯ ಬೆಳ್ಳಾರೆಯ ಡಾನ್ಸ್ & ಬೀಟ್ಸ್ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ಸಂಜೆ ಖ್ಯಾತ ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರಿಂದ ಜಾನಪದ ಸಂಜೆ, ನಂತರ ಪ್ರಸಿದ್ಧ ಹಾಸ್ಯ ಮಾತುಗಾರ ಆಧುನಿಕ ಬೀಚಿ ಎಂದೇ ಪ್ರಸಿದ್ಧರಾಗಿರುವ ಗಂಗಾವತಿ ಪ್ರಾಣೇಶ್ ಅವರಿಂದ ಸ್ಟಾಂಡ್ ಆಪ್ ಕಾಮಿಡಿ ನಡೆಯಲಿದೆ.