Kodagu

ಮಡಿಕೇರಿಯಲ್ಲಿ ಡಿ.4ರಿಂದ 6ರವರೆಗೆ 5ನೇ ವರ್ಷದ ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ : 12 ತಂಡಗಳ ನಡುವೆ ರೋಚಕ ಹಣಾಹಣಿ : ಪ್ರಥಮ ಬಹುಮಾನ ರೂ.2 ಲಕ್ಷ, ಸುಮಾರು 250 ಆಟಗಾರರು ಭಾಗಿ

admincoorgdaily

ಮಡಿಕೇರಿಯಲ್ಲಿ ಡಿ.4ರಿಂದ 6ರವರೆಗೆ 5ನೇ ವರ್ಷದ ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ : 12 ತಂಡಗಳ ನಡುವೆ ರೋಚಕ ಹಣಾಹಣಿ : ಪ್ರಥಮ ಬಹುಮಾನ ರೂ.2 ಲಕ್ಷ, ಸುಮಾರು 250 ಆಟಗಾರರು ಭಾಗಿ
ಮಡಿಕೇರಿ ನ.28 : ಕೊಡವ ಯುವ ಆಟಗಾರರಿಗೆ ಕ್ರೀಡಾ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಹಾಗೂ ಕ್ರಿಕೆಟ್ ಕ್ಷೇತ್ರದಲ್ಲಿ ರಾಷ್ಟçಮಟ್ಟದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಡಿ. 4, 5 ಮತ್ತು 6ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 5ನೇ ವರ್ಷದ ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಮಡಿಕೇರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ ಹಾಗೂ ಕಾರ್ಯದರ್ಶಿ ಓಡಿಯಂಡ ಮಾಚಯ್ಯ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದರು.

ಕೊಡವ ಕ್ರಿಕೆಟ್ ಪ್ರೇಮಿಗಳಲ್ಲಿ ಕ್ರೀಡಾ ಉತ್ಸಾಹ ಹೆಚ್ಚಿಸಿರುವ ಕೊಡವ ಪ್ರೀಮಿಯರ್ ಲೀಗ್ ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದೀಗ 5ನೇ ವರ್ಷದ ಟೂರ್ನಿಗೆ ಸಜ್ಜಾಗಿದೆ. ಕೊಡಗಿನಲ್ಲಿ ನಡೆಯುತ್ತಿರುವ ದೊಡ್ಡ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಒಂದಾಗಿರುವ ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿದ್ದು, ಸುಮಾರು 250 ಆಟಗಾರರು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲಿದ್ದು, ಸಮುದಾಯದಲ್ಲಿ ಒಗ್ಗಟ್ಟು ಮತ್ತು ಕ್ರೀಡಾ ಬಾಂಧವ್ಯವನ್ನು ಬೆಳೆಸುವಲ್ಲಿ ಯಶಸ್ವಿಯಾಗುತ್ತಿದೆ ಎಂದು ತಿಳಿಸಿದರು.

ಪಂದ್ಯಾವಳಿಯಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ನಡೆಯಲಿದ್ದು, ಪ್ರತಿ ಪಂದ್ಯ ಆರು ಓವರ್ ಗಳದ್ದಾಗಿರುತ್ತದೆ. ಅಂತಿಮ ಪಂದ್ಯ ಎಂಟು ಓವರ್ ಗಳಿಗೆ ಸೀಮಿತವಾಗಿದೆ.

ಪ್ರಥಮ ಬಹುಮಾನ ರೂ.2 ಲಕ್ಷ, ದ್ವಿತೀಯ ಬಹುಮಾನ ರೂ.1 ಲಕ್ಷ, ತೃತೀಯ ರೂ.50 ಸಾವಿರ, ನಾಲ್ಕನೇ ಬಹುಮಾನ ರೂ.25 ಸಾವಿರ. ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳಿಗೆ ನಗದು ಬಹುಮಾನದ ಜೊತೆಗೆ ಟ್ರೋಫಿ ನೀಡಲಾಗುವುದು ಎಂದರು.

ಪಂದ್ಯಾವಳಿಯಲ್ಲಿ ಟೀಮ್ ಕೊಡವ ವಾರಿಯರ್ಸ್, ಕೊಡವಾಮೆ ಕಲ್ಟ್ಸ್, ಟೀಮ್ ಮಹಾಗುರು, ಕೊಡವ ಬಂಬAಗ, ಟೀಮ್ ಎ.ಐ. ಕ್ರಿಕೆಟರ್ಸ್, ಟೀಮ್ ಮರೆನಾಡ್ ಯುನೈಟೆಡ್, ಟೀಮ್ ಪಡೆಬೀರಂಗ, ಟೀಮ್ ಡಿ ಕೋಚ್, ಎಜೆ ಬಾಯ್ಸ್ ಕೊಡವ ಮಕ್ಕ, ಟೀಮ್ ಏಳ್ ನಾಡ್ ಸ್ಟ್ರೈಕರ್ಸ್, ಟೀಮ್ ಕರವಲೆ ಭಗವತಿ, ಅಂಜಿಗೇರಿ ನಾಡ್ ತಂಡಗಳು ಸೆಣಸಾಡಲಿವೆ. 

ನ.1ರಂದು ಆಟಗಾರರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಬಿಡ್ಡಿಂಗ್ ಮೂಲಕ ನಿಗದಿತ ಮೊತ್ತದ ಆಧಾರದ ಮೇಲೆ ಆಟಗಾರರನ್ನು ತಂಡಗಳಿಗೆ ಆಯ್ಕೆ ಮಾಡಲಾಗಿದೆ. ತಂಡಗಳ ಮಾಲೀಕರು ಹಾಗೂ ಆಟಗಾರರು ಪಂದ್ಯಾವಳಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ಕೊಡವ ಯುವಕರ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವುದು, ಕ್ರಿಕೆಟ್ ಆಟವನ್ನು ಉತ್ತೇಜಿಸುವುದು ಹಾಗೂ ಕೊಡವ ಸಮುದಾಯದ ಕ್ರೀಡಾ ಬಾಂಧವ್ಯವನ್ನು ಬಲಪಡಿಸುವುದು ಈ ಪಂದ್ಯಾವಳಿಯ ಪ್ರಮುಖ ಉದ್ದೇಶವಾಗಿದೆ ಎಂದು ಕುಟ್ಟಂಡ ಕುಟ್ಟಪ್ಪ ಹೇಳಿದರು.

ಕಳೆದ ಐದು ವರ್ಷಗಳಿಂದ ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದ್ದು, 2027ರಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಮಕ್ಕಳಿಗಾಗಿ ವಿಶೇಷ ಪಂದ್ಯಾವಳಿಗಳನ್ನು ಆಯೋಜಿಸುವ ಉದ್ದೇಶವೂ ಇದೆ ಎಂದು ತಿಳಿಸಿದರು.

ಮೂರು ದಿನಗಳ ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಯೂಟ್ಯೂಬ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಕ್ರೀಡಾಭಿಮಾನಿಗಳು ಮನೆಯಲ್ಲಿಯೇ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಪಂದ್ಯಾವಳಿಗೆ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಗಾರರನ್ನು ಪ್ರೋತ್ಸಾಹಿಸುವ ಮೂಲಕ ಟೂರ್ನಿಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ನ ಚಕ್ಕೆರ ಕಾರ್ಯಪ್ಪ ಹಾಗೂ ಮುಕ್ಕಾಟಿರ ದೀಪಕ್ ಉಪಸ್ಥಿತರಿದ್ದರು.