ಉತ್ತರ ಕನ್ನಡ ವಿರುದ್ಧ ಕೊಡಗು ತಂಡಕ್ಕೆ 6-1 ಭರ್ಜರಿ ಜಯ: ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಕೊಡಗು ತಂಡದ ಅಮೋಘ ಪ್ರದರ್ಶನ

Jul 10, 2026 - 21:04
Jul 10, 2026 - 21:42
 0  368
ಉತ್ತರ ಕನ್ನಡ ವಿರುದ್ಧ ಕೊಡಗು ತಂಡಕ್ಕೆ 6-1 ಭರ್ಜರಿ ಜಯ: ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಕೊಡಗು ತಂಡದ ಅಮೋಘ ಪ್ರದರ್ಶನ

ಕೊಡಗು, ಜು.10 : ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಫುಟ್‌ಬಾಲ್ ತಂಡವು ಉತ್ತರ ಕನ್ನಡ ತಂಡವನ್ನು 6-1 ಗೋಲುಗಳ ಅಂತರದಿಂದ ಮಣಿಸಿ ಭರ್ಜರಿ ಜಯ ದಾಖಲಿಸಿದೆ.

ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕೊಡಗು ತಂಡ ಪಂದ್ಯದ ಸಂಪೂರ್ಣ ಅವಧಿಯಲ್ಲಿ ಮೇಲುಗೈ ಸಾಧಿಸಿ ಎದುರಾಳಿ ತಂಡಕ್ಕೆ ತಿರುಗೇಟು ನೀಡುವ ಅವಕಾಶವನ್ನೇ ನೀಡಲಿಲ್ಲ. ಪಂದ್ಯದ ಮೊದಲಾರ್ಧದಲ್ಲೇ ಕೊಡಗು ತಂಡ ಹಲವು ಅವಕಾಶಗಳನ್ನು ಸೃಷ್ಟಿಸಿ ಗೋಲು ಗಳಿಸುವ ಮೂಲಕ ಮುನ್ನಡೆ ಸಾಧಿಸಿತು.

 ದ್ವಿತೀಯಾರ್ಧದಲ್ಲಿಯೂ ಅದೇ ಲಯ ಮುಂದುವರಿಸಿದ ಕೊಡಗು ತಂಡ ಇನ್ನಷ್ಟು ಗೋಲುಗಳನ್ನು ದಾಖಲಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಕೊಡಗು ತಂಡದ ಪರ ದಿವಾಕರ್ ಎರಡು ಗೋಲುಗಳನ್ನು ಬಾರಿಸಿ ಮಿಂಚಿದರೆ, ಆಶಿರ್ ಕೂಡ ಎರಡು ಗೋಲುಗಳನ್ನು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

 ಸಬಿತ್ ಮತ್ತು ಮುಸ್ತಾಕ್ ತಲಾ ಒಂದು ಗೋಲು ಗಳಿಸಿ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದರು. ತಂಡದ ನಾಯಕ ವಿಜು ಸಮರ್ಥ ನಾಯಕತ್ವ ಪ್ರದರ್ಶಿಸಿ ಆಟಗಾರರನ್ನು ಮುನ್ನಡೆಸಿದರು. ಮುಖ್ಯ ಕೋಚ್ ಜಗದೀಶ್ ಪಣತಾಲೆ , ಸಹಾಯಕ ಕೋಚ್ ದೀಪು ಮಾಚ್ಚಯ್ಯ ಹಾಗೂ ತಂಡದ ವ್ಯವಸ್ಥಾಪಕ ದರ್ಶನ್ ಸುಕುಮಾರ್ ಅವರ ಮಾರ್ಗದರ್ಶನದಲ್ಲಿ ಕೊಡಗು ತಂಡ ಸಂಘಟಿತ ಆಟ ಪ್ರದರ್ಶಿಸಿ ಗಮನ ಸೆಳೆಯಿತು.

ಈ ಭರ್ಜರಿ ಗೆಲುವಿನೊಂದಿಗೆ ಕೊಡಗು ತಂಡವು ಪಂದ್ಯಾವಳಿಯಲ್ಲಿ ತನ್ನ ಬಲಿಷ್ಠ ಪೈಪೋಟಿಯನ್ನು ಮುಂದುವರಿಸಿದ್ದು, ಮುಂದಿನ ಪಂದ್ಯಗಳಿಗೂ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಜಿಲ್ಲೆಯ ಕ್ರೀಡಾಭಿಮಾನಿಗಳು ಹಾಗೂ ಫುಟ್‌ಬಾಲ್ ಪ್ರೇಮಿಗಳು ತಂಡದ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ:ಅಶೋಕ್ ಮಡಿಕೇರಿ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0