ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿಯ ಕತ್ತು ಹಿಸುಕಿ ಕೊಲೆ

Jan 7, 2026 - 19:12
 0  1.4k
ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿಯ ಕತ್ತು ಹಿಸುಕಿ ಕೊಲೆ
Photo credit: TV09

ಬೆಂಗಳೂರು, ಜ. 07: ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರಹಳ್ಳಿಯಲ್ಲಿ 6 ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿಯ ಮೇಲಿನ ದ್ವೇಷವೇ ಈ ದುಷ್ಕೃತ್ಯಕ್ಕೆ ಕಾರಣವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತಾ ಮೂಲದ ಶಹಜಾನ್ ಕತೂನ್ (6) ಎಂಬ ಬಾಲಕಿ ನಿನ್ನೆ (ಜನವರಿ 6) ಮಧ್ಯಾಹ್ನದಿಂದ ಕಾಣೆಯಾಗಿದ್ದಳು. ಈ ಕುರಿತು ಬಾಲಕಿಯ ತಂದೆ ಇಂಜಮುಲ್ ಶೇಖ್ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಲೇಬರ್ ಕೆಲಸ ಮಾಡುತ್ತಿರುವ ಇಂಜಮುಲ್ ಶೇಖ್ ಅವರ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿ ಪರಿಶೀಲನೆ ನಡೆಸಿದ ವೇಳೆ, ಬಾಲಕಿ ಪರಿಚಿತ ವ್ಯಕ್ತಿಯೊಂದಿಗೇ ತೆರಳಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನಲ್ಲೂರಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.

ಮಧ್ಯರಾತ್ರಿ ದೇವಸ್ಥಾನ ರಸ್ತೆಯ ಮೋರಿಯೊಂದರಲ್ಲಿ ಬ್ಯಾಗ್‌ನೊಳಗೆ ಬಾಲಕಿಯ ಮೃತದೇಹ ಪತ್ತೆಯಾಯಿತು. ತಕ್ಷಣ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪ್ಲಾಸ್ಟಿಕ್ ವೈರ್‌ನಿಂದ ಬಾಲಕಿಯ ಕತ್ತು ಬಿಗಿದು ಕೊಲೆ ಮಾಡಿರುವುದು ತಿಳಿದುಬಂದಿದೆ. ಮೃತದೇಹದ ಮೇಲೆ ಯಾವುದೇ ಹಲ್ಲೆ ಅಥವಾ ಲೈಂಗಿಕ ದೌರ್ಜನ್ಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರ ಪ್ರಕಾರ, ಆರೋಪಿ ಹಾಗೂ ಬಾಲಕಿಯ ಕುಟುಂಬದ ನಡುವೆ ಹಿಂದಿನಿಂದಲೂ ವೈಷಮ್ಯ ಇತ್ತು. ತಾಯಿ ಮೇಲಿನ ದ್ವೇಷದಿಂದಲೇ ಬಾಲಕಿಯನ್ನು ಗುರಿಯಾಗಿಸಿಕೊಂಡಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿ ಯಾರು ಎಂಬುದು ಪೊಲೀಸರಿಗೆ ಪತ್ತೆಯಾಗಿದ್ದು, ವಿಶೇಷ ತಂಡ ರಚಿಸಿ ಶೋಧ ಕಾರ್ಯ ಮುಂದುವರಿದಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 1
Sad Sad 5
Wow Wow 0