Kodagu

ಪೊನ್ನಂಪೇಟೆಯಲ್ಲಿ ವೀರಯೋಧ ದೇವಯ್ಯನವರ 61ನೇ ಪುಣ್ಯಸ್ಮರಣೆ

admincoorgdaily

ಪೊನ್ನಂಪೇಟೆಯಲ್ಲಿ ವೀರಯೋಧ ದೇವಯ್ಯನವರ 61ನೇ ಪುಣ್ಯಸ್ಮರಣೆ
ಪೊನ್ನಂಪೇಟೆ,ಸೆ 07: ಪೊನ್ನಂಪೇಟೆಯ ನಂ. 64 ಕಿಗ್ಗಟ್ಟ್ ನಾಡ್ ಮಾಜಿ ಸೈನಿಕರ ಸಂಘದ ವತಿಯಿಂದ ಸೋಮವಾರದಂದು ದಿವಂಗತ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬೊಪ್ಪಯ್ಯ ದೇವಯ್ಯ (ಮಹಾವೀರ ಚಕ್ರ) ಅವರ 61ನೇ ಪುಣ್ಯಸ್ಮರಣೆ ದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರ ಕೋದೇಂಗಡ ಜಿ.ಕಾರ್ಯಪ್ಪ(ಕಾನೂರು ಜಂಕ್ಷನ್)ಜಂಕ್ಷನ್‌ ಬಳಿ ಸ್ಥಾಪಿಸಲಾಗಿರುವ ವೀರ ಸೇನಾನಿಯ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ, ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಐನಂಡ ಕೆ.ಮಂದಣ್ಣ ಮಾತನಾಡಿ,ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬೊಪ್ಪಯ್ಯ ದೇವಯ್ಯ ಅವರು 1965ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಅಪ್ರತಿಮ ಶೌರ್ಯ ಮೆರೆದ ಹೆಮ್ಮೆಯ ಕೊಡಗಿನ ವೀರಯೋಧ. 1932ರ ಡಿಸೆಂಬರ್ 24ರಂದು ಮಡಿಕೇರಿಯಲ್ಲಿ ಜನಿಸಿದ ಅವರು 1954ರಲ್ಲಿ ಭಾರತೀಯ ವಾಯುಪಡೆಗೆ ಪೈಲಟ್ ಆಗಿ ಸೇರ್ಪಡೆಗೊಂಡಿದ್ದರು. 1965ರ ಸೆಪ್ಟೆಂಬರ್ 7ರಂದು ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯ ಮೇಲಿನ ಕಾರ್ಯಾಚರಣೆಯಲ್ಲಿ ಅವರು ‘ಮಿಸ್ಟೇರ್ IVA’ ಯುದ್ಧವಿಮಾನದಲ್ಲಿ ಪಾಲ್ಗೊಂಡಿದ್ದರು. ವಾಪಸಾಗುವ ವೇಳೆ ಪಾಕಿಸ್ತಾನದ ಎಫ್-104 ಸ್ಟಾರ್‌ಫೈಟರ್ ಎದುರಾದರೂ, ಧೈರ್ಯದಿಂದ ಹೋರಾಡಿ ಶತ್ರು ವಿಮಾನವನ್ನು ಹೊಡೆದುರುಳಿಸಿದರು. ಬಳಿಕ ಅವರ ವಿಮಾನ ಪಾಕಿಸ್ತಾನದ ಗಡಿಯೊಳಗೆ ಪತನಗೊಂಡು ವೀರಮರಣ ಹೊಂದಿದರು.ಅವರ ಶೌರ್ಯ ಗಾಥೆ 23 ವರ್ಷಗಳ ಬಳಿಕ ಬೆಳಕಿಗೆ ಬಂದಿದ್ದು, ದೇಶಕ್ಕಾಗಿ ಮಾಡಿದ ಸರ್ವೋಚ್ಚ ತ್ಯಾಗವನ್ನು ಗೌರವಿಸಿ 1988ರಲ್ಲಿ ಮರಣೋತ್ತರವಾಗಿ ಮಹಾವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೇಶದ ರಕ್ಷಣೆಗೆ ಅವರ ಕೊಡುಗೆ ಹಾಗೂ ಬಲಿದಾನ ಇಂದಿಗೂ ಸ್ಮರಣೀಯವಾಗಿದೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚೆಕ್ಕೇರ ರಮೇಶ್, ಕಾರ್ಯದರ್ಶಿ ಪಿ .ಎ ಶಾಂ ಪ್ರಸಾದ್, ಜಂಟಿ ಕಾರ್ಯದರ್ಶಿ ಬಿ .ಎನ್ ಬೆಳ್ಳಿಯಪ್ಪ, ಬಿ.ಬಿ ಜನಕ, ಎಂ ಎಸ್ ಮುತ್ತಣ್ಣ, ಅಣ್ಣೀರ ಮಾದಯ್ಯ ಹಾಗೂ ಸಾರ್ವಜನಿಕರು ಹಾಜರಿದ್ದರು.