ಕಾರಿನ ಏರ್‌ಬ್ಯಾಗ್ ಬಡಿದು ಅಪ್ಪನ ತೊಡೆಯ ಮೇಲೆ ಕುಳಿತಿದ್ದ 7 ವರ್ಷದ ಬಾಲಕ ಮೃತ್ಯು | ಮಕ್ಕಳನ್ನು ಮುಂದಿನ ಸೀಟಿನಲ್ಲಿ ಕೂರಿಸದಿರಿ.. ಎಚ್ಚರ!

ಕಾರಿನ ಏರ್‌ಬ್ಯಾಗ್ ಬಡಿದು ಅಪ್ಪನ ತೊಡೆಯ ಮೇಲೆ ಕುಳಿತಿದ್ದ 7 ವರ್ಷದ ಬಾಲಕ ಮೃತ್ಯು | ಮಕ್ಕಳನ್ನು ಮುಂದಿನ ಸೀಟಿನಲ್ಲಿ ಕೂರಿಸದಿರಿ.. ಎಚ್ಚರ!
Photo credit: The times of inda

ಚೆನ್ನೈ: ತಮಿಳುನಾಡಿನ ತಿರುಪೋರೂರು ಸಮೀಪದ ಹಳೆಯ ಮಹಾಬಲಿಪುರಂ ರಸ್ತೆಯಲ್ಲಿ (ಒಎಂಆರ್) ನಡೆದ ರಸ್ತೆ ಅಪಘಾತದಲ್ಲಿ ಏರ್‌ಬ್ಯಾಗ್ ಬಡಿದ ಪರಿಣಾಮ 7 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಬಾಲಕನನ್ನು ಕೆವಿನ್ (7) ಎಂದು ಗುರುತಿಸಲಾಗಿದೆ.

ಅಪಘಾತದ ಸಮಯದಲ್ಲಿ ಆತ ತನ್ನ ತಂದೆಯ ಮಡಿಲಲ್ಲಿ ಮುಂಭಾಗದ ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಎಂದು ತಿಳಿದು ಬಂದಿದೆ. ಪೊಲೀಸರ ಮಾಹಿತಿಯ ಪ್ರಕಾರ, ಚೆಂಗಲ್ಪಟ್ಟು ಜಿಲ್ಲೆಯ ಪುದುಪಟ್ಟಣಂ ಗ್ರಾಮದ ನಿವಾಸಿ ವೀರಮುತ್ತು ಅವರು ತಮ್ಮ ಪತ್ನಿ, ಮಗ ಕೆವಿನ್ ಮತ್ತು ಇಬ್ಬರೊಂದಿಗೆ ಬಾಡಿಗೆ ಕಾರಿನಲ್ಲಿ ಚೆನ್ನೈಗೆ ತೆರಳುತ್ತಿದ್ದರು. ಕಾರನ್ನು ವಿಶ್ಲೇಶ್ ಎಂಬ ವ್ಯಕ್ತಿ ಚಾಲನೆ ಮಾಡುತ್ತಿದ್ದರು.

ಅವರ ಮುಂದೆ ಸಾಗುತ್ತಿದ್ದ ಸುರೇಶ್ ಎಂಬವರ ಕಾರು ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಡಿಕ್ಕಿಯ ತೀವ್ರತೆಯಿಂದ ಕಾರಿನ ಏರ್‌ಬ್ಯಾಗ್ ತಕ್ಷಣ ತೆರೆದು ಸ್ಫೋಟಗೊಂಡಿತು. ಅದೇ ವೇಳೆ, ತಂದೆಯ ಮಡಿಲಲ್ಲಿ ಕುಳಿತಿದ್ದ ಕೆವಿನ್ ಮುಖಕ್ಕೆ ಏರ್‌ಬ್ಯಾಗ್ ಬಡಿದು, ಆತ ಪ್ರಜ್ಞೆ ತಪ್ಪಿದ ಎನ್ನಲಾಗಿದೆ.

 ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಮಗುವನ್ನು ಆಂಬ್ಯುಲೆನ್ಸ್‌ನಲ್ಲಿ ತಿರುಪೋರೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಕೆವಿನ್ ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

 ಈ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾರಿಗೆ ಸುರಕ್ಷತಾ ನಿಯಮಗಳ ಪ್ರಕಾರ ಮಕ್ಕಳನ್ನು ಮುಂದಿನ ಸೀಟಿನಲ್ಲಿ ಸೀಟ್ ಬೆಲ್ಟ್ ಇಲ್ಲದೆ ಕೂರಿಸಲು ಅನುಮತಿ ಇಲ್ಲ. ಹಾಗೆ ಕೂರಿಸುವುದು ವಾಹನ ಸುರಕ್ಷತಾ ನಿಯಮಗಳಿಗೆ ವಿರುದ್ಧವಾಗಿದೆ.

ಆದರೆ, ಇಂತಹ ತಪ್ಪುಗಳನ್ನು ಅನೇಕರು ಮಾಡುತ್ತಲೇ ಇದ್ದಾರೆ. ಏರ್‌ಬ್ಯಾಗ್‌ನ ಪಾತ್ರ ಏನು? ಏರ್‌ಬ್ಯಾಗ್‌ಗಳು ಕಾರು ಅಪಘಾತದ ವೇಳೆ ಪ್ರಯಾಣಿಕರ ಜೀವ ರಕ್ಷಿಸಲು ವಿನ್ಯಾಸಗೊಳಿಸಲಾದ ಪ್ರಮುಖ ಸುರಕ್ಷತಾ ಸಾಧನಗಳು. ಅಪಘಾತದ ಕ್ಷಣದಲ್ಲಿ ಕಾರಿನ ಸಂವೇದಕಗಳು ತೀವ್ರ ಕಂಪನವನ್ನು ಪತ್ತೆಹಚ್ಚಿ, ಏರ್‌ಬ್ಯಾಗ್ ವ್ಯವಸ್ಥೆಗೆ ತಕ್ಷಣ ಸಿಗ್ನಲ್ ಕಳುಹಿಸುತ್ತವೆ.

 ಆ ಕ್ಷಣದಲ್ಲೇ ಗ್ಯಾಸ್ ಇನ್ನೇಟರ್ ಸಕ್ರಿಯಗೊಂಡು ಏರ್‌ಬ್ಯಾಗ್ ಕೆಲವು ಸೆಕೆಂಡುಗಳಲ್ಲಿ ಉಬ್ಬುತ್ತದೆ ಅಥವಾ ತೆರೆಯುತ್ತದೆ. ಇವು ಪ್ರಯಾಣಿಕರ ತಲೆ, ಎದೆ ಮತ್ತು ಮುಖವನ್ನು ಸ್ಟೀರಿಂಗ್ ವೀಲ್ ಅಥವಾ ಡ್ಯಾಶ್‌ಬೋರ್ಡ್‌ಗೆ ನೇರವಾಗಿ ಬಡಿಯುವುದನ್ನು ತಡೆಯುತ್ತವೆ.

ಅಂದರೆ, ಮೃದುವಾದ ತಡೆಗೋಡಿಯಾಗಿ ಕೆಲಸಮಾಡಿ ಗಾಯಗಳ ತೀವ್ರತೆಯನ್ನು ಕಡಿಮೆ ಮಾಡುತ್ತವೆ. ಆದರೆ, ಸುರಕ್ಷತಾ ನಿಯಮಗಳ ಅಜ್ಞಾನದಿಂದಾಗಿ ಜೀವ ರಕ್ಷಕವಾದ ಏರ್‌ಬ್ಯಾಗ್ ಒಂದು ಮಗುವಿನ ಜೀವವನ್ನೇ ಕಿತ್ತುಕೊಂಡಿದೆ.