ಚಿಕನ್ ಕೊಡುವಂತೆ ಪಟ್ಟು ಹಿಡಿದ 7 ವರ್ಷದ ಮಗು; ಲಟ್ಟಣಿಗೆಯಿಂದ ಹೊಡೆದು ಕೊಂದ ತಾಯಿ!

ಚಿಕನ್ ಕೊಡುವಂತೆ  ಪಟ್ಟು ಹಿಡಿದ 7 ವರ್ಷದ ಮಗು; ಲಟ್ಟಣಿಗೆಯಿಂದ ಹೊಡೆದು ಕೊಂದ ತಾಯಿ!
Photo credit: Free press journal (Representational Image)

ಪಾಲ್ಘರ್: ಊಟ ಮಾಡುವಾಗ ಚಿಕನ್ ಕೊಡು ಎಂದು ಪಟ್ಟು ಹಿಡಿದ ಏಳು ವರ್ಷದ ಮಗನನ್ನು ತಾಯಿಯೊಬ್ಬಳು ಲಟ್ಟಣಿಗೆಯಿಂದ ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಧನ್ಸರ್ ಗ್ರಾಮದ ಘೋಡಿಲಾ ಸಂಕೀರ್ಣದಲ್ಲಿ ನಡೆದಿದೆ.

ಬಾಲಕನು ಊಟಕ್ಕೆ ಕೋಳಿ ತಿನ್ನಲು ಕೇಳಿದ ಕಾರಣ ಕೋಪಗೊಂಡ ತಾಯಿ ಚಪಾತಿ ಲಟ್ಟಿಸುವ ಲಟ್ಟಣಿಗೆಯಿಂದ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾಳೆ. ತೀವ್ರ ಗಾಯಗಳಿಂದ ಬಳಲುತ್ತಿದ್ದ ಬಾಲಕನಿಗೆ ಚಿಕಿತ್ಸೆ ನೀಡದೇ ಮನೆಯಲ್ಲಿಯೇ ಬಿಟ್ಟುಬಿಟ್ಟ ಪರಿಣಾಮ, ಆತ ತಡರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ನೆರೆಹೊರೆಯವರು ಮಾಹಿತಿ ನೀಡಿದ ಬಳಿಕ, ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ಬಂಧಿಸಿ, ಬಾಲಕನಿಗೆ ಹಲ್ಲೆ ಮಾಡಿದ ಲಟ್ಟಣಿಗೆಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ತಾಯಿಯು ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ನೈಜ ಕಾರಣ ತಿಳಿಯಲಿದೆ.

ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಘಟನೆಯಿಂದಾಗಿ ಮೃತಪಟ್ಟ ಬಾಲಕನ 10 ವರ್ಷದ ಸಹೋದರಿ ಆಘಾತಕ್ಕೊಳಗಾಗಿದ್ದು, ಆಕೆಯನ್ನು ಸುರಕ್ಷಿತ ಆಶ್ರಯದಲ್ಲಿ ಇರಿಸಲಾಗಿದೆ.

 ಕೌಟುಂಬಿಕ ಕಲಹ ಹಾಗೂ ಮಾನಸಿಕ ಒತ್ತಡವೇ ಈ ದುರಂತಕ್ಕೆ ಕಾರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.