ತಲಕಾವೇರಿಯಲ್ಲಿ ರಾತ್ರಿ 7.50ಕ್ಕೆ ಕಾವೇರಿ ತೀರ್ಥೋದ್ಭವ: ಭಕ್ತರಿಗೆ 11 ಪ್ರಮುಖ ಸೂಚನೆ ಪ್ರಕಟಿಸಿದ ದೇವಾಲಯ ಸಮಿತಿ
admincoorgdaily

ತಲಕಾವೇರಿ/ಭಾಗಮಂಡಲ;
ತಲಕಾವೇರಿಯಲ್ಲಿ 17-10-2026 ರಂದು ರಾತ್ರಿ 7.50ಕ್ಕೆ ಸಲ್ಲುವ ಮೀಷ ಲಗ್ನದಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ ನಡೆಯಲಿದೆ. ತೀರ್ಥೋದ್ಭವಕ್ಕೆ ಆಗಮಿಸುವ ಸಾವಿರಾರು ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ ಮತ್ತು ದೇವಾಲಯ ಸಮಿತಿ ವತಿಯಿಂದ 11 ಪ್ರಮುಖ ವ್ಯವಸ್ಥೆ ಹಾಗೂ ಸೂಚನೆಗಳನ್ನು ಪ್ರಕಟಿಸಲಾಗಿದೆ.
ಭಕ್ತರಿಗೆ ಪ್ರಮುಖ ಸೂಚನೆಗಳು:
ವಾಹನ ನಿಲುಗಡೆಗೆ ಮಿತಿ: ತಲಕಾವೇರಿಯಲ್ಲಿ 250 ರಿಂದ 300 ವಾಹನಗಳಿಗೆ ಮಾತ್ರ ಅವಕಾಶ ಇರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಅವಕಾಶ ನೀಡಲಾಗುವುದು. ನಂತರ ಯಾವುದೇ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ.
ಉಚಿತ ಬಸ್ ವ್ಯವಸ್ಥೆ:ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ, ಅಲ್ಲಿಂದ ತಲಕಾವೇರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.
ಪಾದಯಾತ್ರಿಕರಿಗೆ ಸೌಲಭ್ಯ: ಭಾಗಮಂಡಲದಿಂದ ತಲಕಾವೇರಿಗೆ ಪಾದಯಾತ್ರೆಯಲ್ಲಿ ತೆರಳುವ ಭಕ್ತರಿಗೆ ಮಾರ್ಗದುದ್ದಕ್ಕೂ ಲೈಟಿಂಗ್, ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.
ದೇವಾಲಯ ಪ್ರವೇಶ ನಿರ್ಬಂಧ: ತಲಕಾವೇರಿಯಲ್ಲಿನ ದೇವಾಲಯಗಳಿಗೆ ಅಪರಾಹ್ನ 2.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ತೀರ್ಥಕೊಳದ ಬಳಿ ವ್ಯವಸ್ಥೆ: ಸಂಜೆ 4.00 ಗಂಟೆಯ ನಂತರ ತೀರ್ಥಕೊಳದ ಸುತ್ತ ಸಾರ್ವಜನಿಕರು ಹಾಗೂ ಗಣ್ಯ ವ್ಯಕ್ತಿಗಳಿಗೆ ಗುರುತಿಸಿರುವ ಸ್ಥಳಗಳಲ್ಲಿ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.
ಸ್ಥಳಾವಕಾಶದ ಕೊರತೆ: ತೀರ್ಥಕೊಳದ ಸುತ್ತ ಸ್ಥಳಾವಕಾಶದ ಕೊರತೆ ಇರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆಯಂತೆ ಸ್ಥಳಾವಕಾಶ ಕಲ್ಪಿಸಲಾಗುವುದು.
ಧಾರ್ಮಿಕ ಆಚರಣೆಗೆ ಮಾತ್ರ ಅವಕಾಶ: ತೀರ್ಥಕೊಳದ ಕುಂಡಿಕೆಯ ಹತ್ತಿರ ಮಹಾ ಸಂಕಲ್ಪ ಮಾಡುವ ಅರ್ಚಕರು, ಅವರ ಸಹಾಯಕರು, ತಕ್ಕ ಮುಖ್ಯಸ್ಥರು, ದೇವಾಲಯದ ಸಿಬ್ಬಂದಿಗಳು, ವ್ಯವಸ್ಥಾಪನಾ ಸಮಿತಿಯವರು ಹಾಗೂ ತೀರ್ಥಕೊಳದ ಎಡಬದಿಯಲ್ಲಿ ಧಾರ್ಮಿಕ ಆಚರಣೆಯ ಮಡಿಕಟ್ಟು ಸದಸ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ತೀರ್ಥ ಸಂಗ್ರಹಕ್ಕೆ ಪ್ರತ್ಯೇಕ ಸ್ಥಳ: ತೀರ್ಥೋದ್ಭವದ ನಂತರ ತೀರ್ಥವನ್ನು ಪಡೆದುಕೊಳ್ಳಲು ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಲಾಗಿದ್ದು, ಸದರಿ ಸ್ಥಳದಲ್ಲೇ ತೀರ್ಥವನ್ನು ಪಡೆದುಕೊಳ್ಳತಕ್ಕದ್ದು.
ಪವಿತ್ರ ಸ್ನಾನಕ್ಕೆ ಅವಕಾಶ: ತೀರ್ಥಕೊಳದಲ್ಲಿ ಪವಿತ್ರ ಸ್ನಾನ ಮಾಡುವ ಭಕ್ತಾದಿಗಳಿಗೆ ಎರಡು ಸರದಿ ಸಾಲಿನಲ್ಲಿ ತೆರಳಿ ಪವಿತ್ರ ಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
LED ಪರದೆ ವ್ಯವಸ್ಥೆ: ಪವಿತ್ರ ಕುಂಡಿಕೆಯ ಹತ್ತಿರ ಸ್ಥಳಾವಕಾಶದ ಕೊರತೆ ಇರುವುದರಿಂದ ತೀರ್ಥೋದ್ಭವ ವೀಕ್ಷಣೆಗೆ LED ಪರದೆಯನ್ನು ಅಳವಡಿಸಲಾಗಿದೆ.
ಸಹಾಯವಾಣಿ ಕೇಂದ್ರ: ವಾಹನ ನಿಲುಗಡೆಯ ಸ್ಥಳಗಳಲ್ಲಿ ಹಾಗೂ ಆಯಾ ಸ್ಥಳಗಳಲ್ಲಿ ಸಹಾಯವಾಣಿ ಹಾಗೂ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.