8 ವರ್ಷ ಹಳೆಯ ಎಟಿಎಂ ವಂಚನೆ ಪ್ರಕರಣ: ಇಬ್ಬರಿಗೆ ಜೈಲು ಶಿಕ್ಷೆ ಪ್ರಕಟ
admincoorgdaily

ಮಡಿಕೇರಿ: 2018ರಲ್ಲಿ ನಡೆದಿದ್ದ 3 ಲಕ್ಷಕ್ಕೂ ಅಧಿಕ ಮೊತ್ತದ ಎಟಿಎಂ ವಂಚನೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ 8 ವರ್ಷಗಳ ನಂತರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಕುಶಾಲನಗರದ 7ನೇ ಹೊಸಕೋಟೆಯ ಅಬ್ದುಲ್ ಸಲಾಂ ಮತ್ತು ಸೀಗೆಹೊಸೂರು ಗ್ರಾಮದ ರವಿ ಶಿಕ್ಷೆಗೆ ಗುರಿಯಾದವರು. ಇವರು ಎಟಿಎಂಗೆ ಹಣ ತುಂಬುವ ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು.
2018ರ ಮಾರ್ಚ್ 28ರಂದು ಬೈಲುಕುಪ್ಪೆಯ ಲಾಮಾ ಕ್ಯಾಂಪ್ ರಸ್ತೆಯ ಬ್ಯಾಂಕ್ ಎಟಿಎಂಗೆ 5 ಲಕ್ಷ ರೂ. ತುಂಬಲು ಕಂಪನಿ ನೀಡಿತ್ತು. ಆದರೆ ಇವರು ಕೇವಲ 1,98,500 ರೂ. ಮಾತ್ರ ಎಟಿಎಂನಲ್ಲಿ ಇಟ್ಟು, ಉಳಿದ 3,01,500 ರೂ.ವನ್ನು ತಾವೇ ಇಟ್ಟುಕೊಂಡು ವಂಚಿಸಿದ್ದರು.
ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಪಿಎಸ್‌ಐ ಎಂ. ಮಹೇಶ್ ತನಿಖೆ ನಡೆಸಿ, ಪಿಎಸ್‌ಐ ಸವಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಅ.3ರಂದು ಪ್ರಕರಣದ ವಿಚಾರಣೆ ನಡೆಸಿದ ಪಿರಿಯಾಪಟ್ಟಣ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ. ರಾಜು ಅವರು, ಆರೋಪ ಸಾಬೀತಾಗಿದೆ ಎಂದು ಪರಿಗಣಿಸಿ ಇಬ್ಬರಿಗೂ ತಲಾ 6 ತಿಂಗಳು ಸಾಧಾರಣ ಜೈಲು ಮತ್ತು ತಲಾ 1,70,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದರೆ ಮತ್ತೆ 2 ತಿಂಗಳು ಜೈಲು ಅನುಭವಿಸಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರ ಅಭಿಯೋಜಕ ಶಿವಪ್ರಸಾದ್ ಗಾವಂಕರ್ ವಾದಿಸಿದ್ದರು.