Kodagu

ಕಡಂಗ ಸರಕಾರಿ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

admincoorgdaily

ಕಡಂಗ ಸರಕಾರಿ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ವಿರಾಜಪೇಟೆ: ಕಡಂಗ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಹಾಗೂ ಉದ್ಯಮಿ ಸಲಾಂ ಎಂ.ಕೆ. ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಭಾರತ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಮಹತ್ವದ ಕುರಿತು ವಿವರಿಸಿದರು. ತಮ್ಮ ಯಶಸ್ಸಿಗೆ ಕಾರಣಕರ್ತರಾದ ತಂದೆ ಅಬ್ದುಲ್ಲಾ ಹಾಗೂ ತಾಯಿ ರುಕೀಯ ಅವರ ಶ್ರಮದಿಂದ ಯಶಸ್ಸು ಸಾಧ್ಯವಾಗಿದ್ದು, ಅವರ ಪ್ರೇರಣೆ ಎಲ್ಲರಿಗೂ ಮಾದರಿಯಾಗಲಿ ಎಂದು ಆಶಿಸಿದ ಅವರು, 1 ರಿಂದ 7ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ತಲಾ 1,000 ರೂಪಾಯಿ ಧನಸಹಾಯ ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಸೈನಿಕ ಸಲಾಂ ಅವರ ಪುತ್ರಿ ನಹಳ ಎಂ.ಎಸ್. ಮಾತನಾಡಿ, ಮಹಾತ್ಮರ ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯದ ಮೌಲ್ಯ, ತ್ರಿವರ್ಣ ಧ್ವಜದ ಗೌರವ ಹಾಗೂ ಪರಿಸರ ರಕ್ಷಣೆ ಮತ್ತು ಸ್ವಚ್ಛತೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಬೂಬಕರ್ (ರಾಯಲ್ ಕಾಫಿ), ಕರೀಂ ಟಿ.ಎಂ. ಶಾಲೆಯ ಸ್ಥಳದಾನಿಗಳಾದ ಕಣಿಯಂಡ ಪ್ರಕಾಶ್, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.