ಸೈನಿಕ ಶಾಲೆ ಕೊಡಗಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ : ಶಾಲೆಯ ಸಂಸ್ಥಾಪಕರಿಗೆ ಗೌರವ ನಮನ
admincoorgdaily

ಕುಶಾಲನಗರ, ಆ. 15 : ಕುಶಾಲನಗರ ಸಮೀಪದ ಸೈನಿಕ ಶಾಲೆ ಕೊಡಗಿನ ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸೇನಾ ವೈಭವ ಹಾಗೂ ಹೆಮ್ಮೆಯೊಂದಿಗೆ ಆಚರಿಸಲಾಯಿತು.
ದೇಶದ ಎಂಟು ದಶಕಗಳ ಸ್ವಾತಂತ್ರ್ಯದ ನೆನಪಿನಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಬೋಧಕ - ಬೋಧಕೇತರ ಸಿಬ್ಬಂದಿ, ನಿವೃತ್ತ ಯೋಧರು ಹಾಗೂ ಗಣ್ಯ ಸಂಸ್ಥಾಪಕರು ಭಾಗವಹಿಸಿದ್ದರು.
ಬೆಂಗಳೂರಿನ ಏರ್ ಫೋರ್ಸ್ ಕೊಡಗು ಅಸೋಸಿಯೇಷನ್‌ನ ಅಧ್ಯಕ್ಷರಾದ ಏರ್ ಮಾರ್ಷಲ್ ಬಾಲ್ತಿಕಲಾಂಡ ಯು. ಚೆಂಗಪ್ಪ (ನಿವೃತ್ತ), ಪಿ ವಿ ಎಸ್ ಎಂ, ಎ ವಿ ಎಸ್ ಎಂ, ವಿ ಎಸ್ ಎಂ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮೊದಲಿಗೆ ಶಾಲಾ ಅಶ್ವದಳದೊಳದೊಂದಿಗೆ ಮುಖ್ಯ ಅತಿಥಿಗಳನ್ನು ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಹಾಗೂ ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮಹಮದ್ ಶಾಜಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ನಂತರ ಮುಖ್ಯ ಅತಿಥಿಗಳು ಶಾಲೆಯಲ್ಲಿನ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಸಮರ್ಪಿಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ನಂತರ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು ದ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಗಳು ಶಾಲೆಯ ಮೆನನ್, ಕಾರ್ಯಪ್ಪ, ಕಟಾರಿ ಮತ್ತು ಸುಬ್ರತೋ ಎಂಬ ನಾಲ್ಕು ಹೌಸ್‌ಗಳ ತುಕಡಿಗಳ ಪರಿವೀಕ್ಷಣೆ ನಡೆಸಿದರು. ಪರೇಡ್ ಕಮಾಂಡರ್ ಕೆಡೆಟ್ ಸಿದ್ದಾಂತ್ ಹಾಗೂ ಧ್ವಜಧಾರಿ ಕೆಡೆಟ್ ಮಿತ್ರ ಅವರ ನೇತೃತ್ವದಲ್ಲಿ ಕೆಡೆಟ್‌ಗಳು ಶಿಸ್ತುಬದ್ಧ ಹಾಗೂ ಆಕರ್ಷಕ ಪಥಸಂಚಲನ ಪ್ರದರ್ಶಿಸಿದರು.
ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಗಣ್ಯರನ್ನು ಗೌರವಿಸುವ ಸಲುವಾಗಿ ಶಾಲೆಯ ಆಡಳಿತ ಭವನವಾದ ಕೌಟಿಲ್ಯ ಬ್ಲಾಕ್‌ನಲ್ಲಿ ಏರ್ ಮಾರ್ಷಲ್ ಚೆಂಗಪ್ಪ ಅವರು ಸ್ಮರಣಾರ್ಥ ಫಲಕವನ್ನು ಅನಾವರಣಗೊಳಿಸಿದರು. ಕೊಡಗು ಜಿಲ್ಲೆಯ ನಿವೃತ್ತ ಯೋಧರೊಂದಿಗೆ ಸಂಸ್ಥೆಯ ಆರಂಭಿಕ ಬೆಳವಣಿಗೆಗೆ ಕಾರಣೀಕರ್ತರಾದ ವಿಂಗ್ ಕಮಾಂಡರ್ ಅಪ್ಪಣ್ಣ (ನಿವೃತ್ತ), ಲೆಫ್ಟಿನೆಂಟ್ ಕರ್ನಲ್ ಕಾವೇರಿಯಪ್ಪ ಮತ್ತು ಸರ್ಜೆಂಟ್ ನಂಜಪ್ಪ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಹಾಗೆಯೇ 2025-26ನೇ ಶೈಕ್ಷಣಿಕ ಸಾಲಿನ ಅತ್ಯುತ್ತಮ ನಿರ್ಗಮಿತ ವಿದ್ಯಾರ್ಥಿ ಕೆಡೆಟ್ ಹಾಲಚಂದ್ರ (ಎನ್‌ಡಿಎ ಪ್ರವೇಶ), ಶೈಕ್ಷಣಿಕ ವಿಭಾಗದಲ್ಲಿ ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನು ಕೆಡೆಟ್ ಕಲ್ಲೇಶ್ ಬೇವಿನಾಳ್ (ಎನ್‌ಡಿಎ ಪ್ರವೇಶ), ಕ್ರೀಡಾ ವಿಭಾಗದಲ್ಲಿ ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನು ಕೆಡೆಟ್ ಹೃದಯ ಪಡೆದರು. ಹಾಗೆಯೇ ಸಿ ಬಿ ಎಸ್ ಇ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕೆಡೆಟ್ ಗಗನ್ ದೀಪ್ ಆರ್. (ಶೇ. 97.8 ಮತ್ತು ವಿಜ್ಞಾನ ವಿಷಯದಲ್ಲಿ ನೂರಕ್ಕೆ ನೂರು ಅಂಕ), ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಕೆಡೆಟ್ ಹೃಷಿಕೇಶ್ ರೂಗಿ, ಹಾಗೆಯೇ ಕೃತಕ ಬುದ್ಧಿಮತ್ತೆ (AI) ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಕೆಡೆಟ್ ಪ್ರಣವ್ ನರೇಂದ್ರ ರಾವ್, ಕೆಡೆಟ್ ಶಾಶ್ವತ್ ಸಿಂಗ್ ಮತ್ತು ಕೆಡೆಟ್ ಹಿಮಾಂಕ್ ಕುಮಾರ್ ಭಯಾನ ಅವರನ್ನು ಗೌರವಿಸಲಾಯಿತು. ಇವರಿಗೆ ಮಾರ್ಗದರ್ಶನ ನೀಡಿದ ಬೋಧಕರಾದ ಎನ್. ಸುಬ್ಬರಂಗಯ್ಯ, ದಾದಾ ಡಿ. ಕುಸನಾಳೆ, ಗೋವಿಂದರಾಜ ಕೆ. ಮತ್ತು ಹನುಮಂತ ರೆಡ್ಡಿ ಅವರ ಸೇವೆಯನ್ನು ಶ್ಲಾಘಿಸಲಾಯಿತು.
ಜೊತೆಗೆ, ಸಂಸ್ಥೆಗೆ ಸಲ್ಲಿಸಿದ ಗಣನೀಯ ಸೇವೆಗಾಗಿ ಬಿ.ಎಲ್.ವಿ. ಪ್ರಸಾದ್ ರಾಜು (ಟಿಜಿಟಿ ವಿಜ್ಞಾನ), ಸುನೀಲ್ ಕುಮಾರ್ ಇ. (ಕ್ವಾರ್ಟರ್ ಮಾಸ್ಟರ್) ಮತ್ತು ಶ್ರೀನಿವಾಸ ಕೆ. (ಸಾಮಾನ್ಯ ನೌಕರರು) ಅವರಿಗೆ ‘ಪ್ರಾಂಶುಪಾಲರ ಅಭಿನಂದನಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಏರ್ ಮಾರ್ಷಲ್ ಚೆಂಗಪ್ಪ ಅವರು, ವಿದ್ಯಾರ್ಥಿಗಳು ಪ್ರಾಮಾಣಿಕತೆ ಹಾಗೂ ಸಮರ್ಪಣಾ ಭಾವದಿಂದ ಮುನ್ನಡೆಯಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಸಮಾರೋಪಗೊಂಡಿತು.
ವರದಿ: ಶ್ರೀಧರ್ ನಾರಾಯಣ್