CEIR ಪೋರ್ಟಲ್ ಸಹಾಯದಿಂದ ಕಳವಾದ 894 ಮೊಬೈಲ್ ಪತ್ತೆ: ಮಾಲೀಕರಿಗೆ ಹಸ್ತಾಂತರಿಸಿದ ಬೆಂಗಳೂರು ನಗರ ಪೊಲೀಸರು
ಬೆಂಗಳೂರು: ಕಳ್ಳತನ ಹಾಗೂ ಕಳವಾದ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚುವಲ್ಲಿ ಸಿಇಐಆರ್ ಪೋರ್ಟಲ್ ಪ್ರಮುಖ ಪಾತ್ರವಹಿಸಿದೆ. ಈ ಪೋರ್ಟಲ್ ಸಹಾಯದಿಂದ ಬೆಂಗಳೂರು ನಗರ ಪೊಲೀಸರು 894 ಮೊಬೈಲ್ಗಳನ್ನು ವಶಪಡಿಸಿಕೊಂಡು, ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ಇಂಟಿಗ್ರೇಟೆಡ್ ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್ ಸಿಬ್ಬಂದಿ ಸಿಇಐಆರ್ (Central Equipment Identity Register) ಪೋರ್ಟಲ್ ಮೂಲಕ ಕಳೆದ ಕೆಲವು ತಿಂಗಳ ಅವಧಿಯಲ್ಲಿ ನೂರಾರು ಮೊಬೈಲ್ಗಳನ್ನು ಪತ್ತೆಮಾಡಿದ್ದಾರೆ. ಕಳ್ಳತನ ಅಥವಾ ಕಳೆದುಹೋದ ಮೊಬೈಲ್ನಲ್ಲಿ ಬೇರೆ ಸಿಮ್ ಕಾರ್ಡ್ ಕಾರ್ಯನಿರ್ವಹಿಸಿದರೆ ಪೋರ್ಟಲ್ನಿಂದ ತಕ್ಷಣ ಮಾಹಿತಿ ದೊರೆಯುತ್ತದೆ.
ಕೇಂದ್ರ ದೂರಸಂಪರ್ಕ ಇಲಾಖೆ 2023ರಲ್ಲಿ ಸಿಇಐಆರ್ ಪೋರ್ಟಲ್ನ್ನು ಪರಿಚಯಿಸಿತ್ತು. ಮೊಬೈಲ್ ಕಳೆದುಕೊಂಡವರು ತಮ್ಮ ಫೋನ್ನ ಇಂಟರ್ನ್ಯಾಷನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ (IMEI) ಸಂಖ್ಯೆಯನ್ನು ಪೋರ್ಟಲ್ನಲ್ಲಿ ದಾಖಲಿಸಬಹುದು. ಇದರಿಂದ ಕಳೆದುಹೋದ ಫೋನ್ನ ಚಲನೆ ಪತ್ತೆಯಾಗುತ್ತದೆ ಹಾಗೂ ಕಳ್ಳರು ಫೋನ್ ಬಳಸಲು ಅಸಾಧ್ಯವಾಗುತ್ತದೆ.
894 ಫೋನ್ಗಳಲ್ಲಿ 522 ಮಾಲೀಕರಿಗೆ ವಾಪಸ್
ಮಾರ್ಚ್ 2024ರಿಂದ ಇಂದಿನವರೆಗೆ ಸಿಇಐಆರ್ ಪೋರ್ಟಲ್ನಲ್ಲಿ ದಾಖಲಾಗಿದ್ದ ಮಾಹಿತಿಯ ಆಧಾರದ ಮೇಲೆ ಬೆಂಗಳೂರು ನಗರ ಪೊಲೀಸರು ಒಟ್ಟು 894 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿ 522 ಮೊಬೈಲ್ಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಉಳಿದ 372 ಮೊಬೈಲ್ಗಳ ವಾರಸುದಾರರು ಸೂಕ್ತ ದಾಖಲೆಗಳೊಂದಿಗೆ ಇಂಟಿಗ್ರೇಟೆಡ್ ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್ಗೆ ಹಾಜರಾಗಿ ವಾಪಸ್ ಪಡೆಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಎಚ್ಚರಿಕೆ ನೀಡಿದ ಪೊಲೀಸರು
ದಾಖಲೆಗಳಿಲ್ಲದೇ ಸೆಕೆಂಡ್ಹ್ಯಾಂಡ್ ಮೊಬೈಲ್ ಖರೀದಿಸುವುದರಿಂದ ಕಾನೂನು ತೊಂದರೆ ಎದುರಾಗಬಹುದು. ಕಳ್ಳತನವಾದ ಮೊಬೈಲ್ ಖರೀದಿ ಮತ್ತು ಮಾರಾಟದಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.