Kodagu

ಕೊಡಗಿನ ತಲಕಾವೇರಿ ವನ್ಯಧಾಮದಲ್ಲಿ ಕಳ್ಳಬೇಟೆ - 8 ಮಂದಿ ಬಂಧನ, ಓರ್ವ ಪರಾರಿ

admincoorgdaily

ಸಾಂದರ್ಭಿಕ ಚಿತ್ರ
ಮಡಿಕೇರಿ:ಕೊಡಗಿನ ತಲಕಾವೇರಿ ವನ್ಯಧಾಮದಲ್ಲಿ ಕಳ್ಳಬೇಟೆಗೆ ತೆರಳಿದ್ದ 8 ಮಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಓರ್ವ ಪರಾರಿಯಾಗಿರುವ ಘಟನೆ ನಡೆದಿದೆ.

ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಬಳಿಯ ತಲಕಾವೇರಿ ವನ್ಯಧಾಮದಲ್ಲಿ ಈ ಘಟನೆ ನಡೆದಿದೆ. ಬೇಟೆಗಾರರು ವನ್ಯಧಾಮದೊಳಗೆ ನುಗ್ಗಿ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಶಬ್ದ ಕೇಳಿ ಅಲರ್ಟ್ ಆದ ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗಿನ ಜಾವ ಕಾರ್ಯಾಚರಣೆ ನಡೆಸಿದ್ದಾರೆ.

ಆರ್‌ಎಫ್‌ಒ ತ್ಯಾಗರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ:

ಆರ್‌ಎಫ್‌ಒ ತ್ಯಾಗರಾಜ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಅರಣ್ಯದೊಳಗಿನ ರಸ್ತೆಯಲ್ಲಿ ನಿಂತಿದ್ದ ಬೇಟೆಗಾರರ ವಾಹನಗಳನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ 8 ಮಂದಿ ಬೇಟೆಗಾರರನ್ನು ಬಂಧಿಸಲಾಗಿದೆ. ಮತ್ತೋರ್ವ ಪರಾರಿಯಾಗಿದ್ದು, ಆತನ ಬಂಧನಕ್ಕೆ ಕಾಡಿನಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಬಂಧಿತರಿಂದ ಬಂದೂಕು, ಮದ್ದು-ಗುಂಡುಗಳು ಹಾಗೂ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಂಗತ್ತೂರು ಗ್ರಾಮದ ವಸಂತ ಎಂಬುವರಿಗೆ ಸೇರಿದ ಒಂಟಿ ನಳಿಕೆ ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಎಸಿಎಫ್ ಅನನ್ಯ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.