ಒಂಟಿಯಂಗಡಿಯಲ್ಲಿ 8ನೇ ವರ್ಷದ ಓಣಂ ಆಚರಣೆ: ಶಾಸಕ ಎ.ಎಸ್. ಪೊನ್ನಣ್ಣ ಭಾಗಿ
admincoorgdaily

ಅಮ್ಮತ್ತಿ:ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪದ ಒಂಟಿಯಂಗಡಿ ಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಒಂಟಿಯಂಗಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಿಂದೂ ಮಲಯಾಳಿ ಸಮಾಜದ ವತಿಯಿಂದ ಆಯೋಜಿಸಿದ್ದ 8ನೇ ವರ್ಷದ ಓಣಂ ಆಚರಣೆ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿ ಶುಭ ಕೋರಿದರು.
ಬಳಿಕ ಮಾತನಾಡಿದ ಅವರು, "ಹಿಂದೂ ಮಲಯಾಳಿ ಸಮಾಜದವರು ನಮ್ಮ ನಾಡಿಗೆ ಸಾಂಸ್ಕೃತಿಕವಾಗಿ ಹಾಗೂ ಹಲವು ರಂಗಗಳಲ್ಲಿ ಬಹುದೊಡ್ಡ ಕೊಡುಗೆ ನೀಡುತ್ತಾ ಬಂದಿದ್ದಾರೆ. ತಮ್ಮದೇ ಆದ ಆಚರಣೆಗಳು, ಶಿಸ್ತು ಹಾಗೂ ವಿಶಿಷ್ಟ ಜೀವನ ಶೈಲಿಯಿಂದ ಸಮಾಜದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಪ್ರಮುಖ ಸಮಾಜವಾಗಿದೆ. ಓಣಂ ಆಚರಣೆಯು ಪೌರಾಣಿಕ ಹಾಗೂ ಆಧುನಿಕ ಮಿಶ್ರಣದೊಂದಿಗೆ ಜನರನ್ನು ಒಟ್ಟುಗೂಡಿಸಿ ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುವ ಕಾರ್ಯ ಮಾಡುತ್ತಿದೆ" ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.
ಇದೇ ವೇದಿಕೆಯಲ್ಲಿ ಸಮಾಜ ಸೇವಕ ಚೋಕಂಡ ಸಂಜು ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಫುಟ್‌ಬಾಲ್ ಸ್ಪರ್ಧೆಯಲ್ಲಿ ಜಯಗಳಿಸಿದ ತಂಡಗಳಿಗೆ ಮಲಯಾಳಿ ಸಮಾಜದ ವತಿಯಿಂದ ಪಾರಿತೋಷಕ ಹಾಗೂ ಧನ ಸಹಾಯ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.