ಪೊನ್ನಂಪೇಟೆಯಲ್ಲಿ 9 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ
admincoorgdaily

ಪೊನ್ನಂಪೇಟೆ, ಸೆ.16: ಪೊನ್ನಂಪೇಟೆ ಪಟ್ಟಣದ ವಿವಿಧ ಒಂಬತ್ತು ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳನ್ನು ಬುಧವಾರ ಸಂಜೆ ಆರಂಭವಾದ ಶೋಭಾಯಾತ್ರೆಯ ಬಳಿಕ ಶಿವ ಕಾಲೋನಿ ಸಮೀಪದ ಗೌರಿ ಕೆರೆಯಲ್ಲಿ ಸಾಮೂಹಿಕವಾಗಿ ವಿಸರ್ಜಿಸಲಾಯಿತು.
ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ, ಪುನಸ್ಕಾರಗಳು ನಡೆದವು. ಸಂಜೆ 6 ಗಂಟೆಗೆ ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆಯಲ್ಲಿ ಕೃಷ್ಣನಗರ, ಶಿವ ಕಾಲೋನಿ, ಮಹಾತ್ಮಗಾಂಧಿ ನಗರ, ಕಾಟ್ರಕೊಲ್ಲಿ, ಜೋಡುಬೀಟಿ, ಕುಂದ ರಸ್ತೆ, ಜನತಾ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳ ಗಣೇಶೋತ್ಸವ ಸಮಿತಿಗಳ ಮೂರ್ತಿಗಳನ್ನು ಅಲಂಕರಿಸಿದ ಮಂಟಪಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಶೋಭಾಯಾತ್ರೆ ಸಾಗಿದ ವಿವಿಧ ಬಡಾವಣೆಗಳಲ್ಲಿ ಡಿಜೆ, ವಾಲಗ ಹಾಗೂ ಬ್ಯಾಂಡ್‌ಸೆಟ್‌ಗಳ ನಾದ ಮೊಳಗಿದ್ದು, ಯುವಕ ಯುವತಿಯರು ಹಾಗೂ ಸಾರ್ವಜನಿಕರು ಸಂಭ್ರಮದಿಂದ ಹೆಜ್ಜೆ ಹಾಕಿದರು. ಕೃಷ್ಣ ನಗರ,ಶಿವಕಾಲೋನಿ ಹಾಗೂ ಕಾಟ್ರಕೊಲ್ಲಿಯ ಗಣೇಶ ಮಂಟಪಗಳು ಗಮನ ಸೆಳೆಯಿತು. ತ್ಯಾಗರಾಜ ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಬಳಿಕ ಗೌರಿ ಕೆರೆಯಲ್ಲಿ ಮುಂಜಾನೆ ಮೂರ್ತಿಗಳ ವಿಸರ್ಜನೆ ನೆರವೇರಿತು. ಪೊನ್ನಂಪೇಟೆ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿರುವುದರಿಂದ ಈ ಬಾರಿ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ದೊರೆಯದಂತಾಗಿ ಕೇವಲ ಶೋಭಾಯಾತ್ರೆಗೆ ಮಾತ್ರ ಸೀಮಿತವಾಯಿತು. ಇದರಿಂದ 12 ಗಂಟೆಯ ವೇಳೆಗೆ ಮೋಜು ಕುಣಿತ ಮುಕ್ತಾಯದ ಹಂತಕ್ಕೆ ತಲುಪಿದ್ದು ಸಾರ್ವಜನಿಕರಿಗೆ ನಿರಾಸೆಯಾಯಿತು.
ಧ್ವನಿವರ್ಧಕ ನಿಯಮ ಪಾಲನೆ
ರಾತ್ರಿ 10 ಗಂಟೆಯ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ ಹಾಗೂ ಇತರ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉತ್ಸವ ಸಮಿತಿ ಕಟ್ಟುನಿಟ್ಟಾಗಿ ಪಾಲಿಸಿತು. ನಿಗದಿತ ಸಮಯಕ್ಕೆ ಡಿಜೆ ಶಬ್ದವನ್ನು ಸ್ಥಗಿತಗೊಳಿಸಿ ನಿಯಮ ಪಾಲನೆ ಮಾಡಿರುವುದು ಗಮನ ಸೆಳೆಯಿತು.
ಅಚ್ಚುಕಟ್ಟಾದ ಪೊಲೀಸ್ ಬಂದೋಬಸ್ತ್
ಡಿವೈಎಸ್ಪಿ ಮಹೇಶ್ ಕುಮಾರ್ ಹಾಗೂ ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪೊನ್ನಂಪೇಟೆ ಠಾಣೆಗೆ ಇತ್ತೀಚೆಗೆ ನಿಯುಕ್ತಿಗೊಂಡಿರುವ ಸಬ್‌ಇನ್ಸ್‌ಪೆಕ್ಟರ್ ಅನ್ನಪೂರ್ಣ ಅವರು ಮೊದಲ ಸಾರ್ವಜನಿಕ ಸಮಾರಂಭದಲ್ಲೇ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿ, ಶೋಭಾಯಾತ್ರೆ ಸುಗಮವಾಗಿ ಸಾಗಲು ಅಗತ್ಯ ವ್ಯವಸ್ಥೆ ಕಲ್ಪಿಸಿದರು.
ನಂದೀಶ್ವರ ಆಟೋ ಸಂಘದಿಂದ ದೇಣಿಗೆ
ಶ್ರೀ ನಂದೀಶ್ವರ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳು ಶ್ರೀ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶೋತ್ಸವಕ್ಕೆ ದೇಣಿಗೆ ನೀಡಿದರು.
ಈ ಸಂದರ್ಭ ದೇವಸ್ಥಾನದ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ, ರಾಜರ ಕಾಲದಿಂದಲೂ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆಗಳು ನಡೆದುಕೊಂಡು ಬಂದಿದ್ದು, ಬಾಲಗಂಗಾಧರ ತಿಲಕ್ ಅವರ ಕಾಲದಿಂದ ಗೌರಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ವಿವಿಧ ಗಣೇಶೋತ್ಸವ ಸಮಿತಿಗಳು, ದೇವಸ್ಥಾನ ಆಡಳಿತ ಮಂಡಳಿ, ಅರ್ಚಕರು ಹಾಗೂ ಊರಿನ ಜನರ ಸಹಕಾರದಿಂದ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು.
ಕಳೆದ 40 ವರ್ಷಗಳಿಂದ ನಂದೀಶ್ವರ ಆಟೋ ಚಾಲಕರ ಹಾಗೂ ಮಾಲೀಕರ ಸಂಘವು ದೇವಸ್ಥಾನದ ಪುನರ್ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಗಳಿಗೆ ಸಹಕಾರ ನೀಡುತ್ತಿದ್ದು, ಸಂಘದ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು. ದೇವಸ್ಥಾನಕ್ಕೆ ಬೆಳ್ಳಿ ಅಲಂಕಾರ ಸೇರಿದಂತೆ ವಿವಿಧ ರೀತಿಯಲ್ಲಿ ದಾನ ನೀಡಿದ ಗಣೇಶ್ ಹಾಗೂ ಇತರ ದಾನಿಗಳ ಸೇವೆಯನ್ನು ಸ್ಮರಿಸಿದ ಅವರು, ಬಸವೇಶ್ವರನು ಎಲ್ಲರಿಗೂ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ಕರುಣಿಸಲಿ ಎಂದು ಹಾರೈಸಿದರು.
ಈ ಸಂದರ್ಭ ವಿವಿಧ ಭಾಗಗಳಿಂದ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಚಿತ್ರ ಶಿರ್ಷಿಕೆ, 24ppt01, 24ppt02, 24ppt03 ಪೊನ್ನಂಪೇಟೆ ಗಣೇಶೋತ್ಸವದಲ್ಲಿ ಪಾಲ್ಗೊಂಡ ಅಲಂಕಾರ ಮಂಟಪಗಳು