ಅ.9ಕ್ಕೆ ಅಕ್ರಮ ವಲಸಿಗರ ವಿರುದ್ಧ ಜನಜಾಗೃತಿ ಜಾಥಾ ಸಮಾರೋಪ
admincoorgdaily

ಮಡಿಕೇರಿ: ದೇಶದ ಆಂತರಿಕ ಸುರಕ್ಷತೆಗೆ ಗಂಭೀರ ಅಪಾಯ ತಂದೊಡ್ಡುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಗಟ್ಟುವಂತೆ ಆಗ್ರಹಿಸಿ ಕೊಡಗು ಜಿಲ್ಲೆಯಾದ್ಯಂತ ೧೨ ದಿನಗಳಿಂದ ನಡೆಯುತ್ತಿರುವ ಜನಜಾಗೃತಿ ವಾಹನ ಜಾಥಾದ ಸಮಾರೋಪ ಕಾರ್ಯಕ್ರಮ ಅ.೯ರ ಶುಕ್ರವಾರ ಮಡಿಕೇರಿಯಲ್ಲಿ ನಡೆಯಲಿದೆ ಕೊಡಗು ಸುರಕ್ಷಾ ಆಂದೋಲನ ಸಮಿತಿ ಸಂಯೋಜಕ ಕುಕ್ಕೇರ ಅಜಿತ್ ತಿಳಿಸಿದ್ದಾರೆ.
ಸೆ.೨೮ ರಂದು ಕೇರಳಂ ಗಡಿಭಾಗ ಕುಟ್ಟದಿಂದ ಆರಂಭಗೊಂಡ ಜನಜಾಗೃತಿ ವಾಹನ ಜಾಥಾ ಕಾರ್ಯಕ್ರಮವು ಕೊಡಗಿನ ೫ ತಾಲ್ಲೂಕುಗಳ ಪ್ರಮುಖ ೪೫ ಸ್ಥಳಗಳಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಸಿ ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನಕ್ಕೆ ಆಗಮಿಸಲಿದೆ.
ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿ ಗಾಂಧಿ ಮೈದಾನದಿಂದ ಆರಂಭವಾಗುವ ಬೃಹತ್ ಜನಜಾಗೃತಿ ಮೆರವಣಿಗೆಯು ಮಡಿಕೇರಿ ಹಳೇ ಖಾಸಗಿ ಬಸ್ ನಿಲ್ದಾಣದ ತನಕ ತೆರಳಲಿದ್ದು ಖಾಸಗಿ ಬಸ್ ನಿಲ್ದಾಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಸಾಮಾಜಿಕ ಸಂಘಟನೆಗಳ ಮುಖಂಡರಿಂದ ಜಾಗೃತಿ ಭಾಷಣ ನಡೆಯಲಿದೆ ಎಂದು ವಿವರಿಸಿದರು.
ದೇಶದೊಳಗೆ ಅಕ್ರಮವಾಗಿ ನುಸುಳಿರುವ ಎರಡು ಕೋಟಿಯಷ್ಟು ಅಕ್ರಮ ಬಾಂಗ್ಲಾ ವಲಸಿಗರು ಈಗಾಗಲೇ ಅಕ್ರಮವಾಗಿ ಮಾಡಿಸಿಕೊಂಡಿರುವ ಆಧಾರ್ ಕಾರ್ಡ್, ವೋಟರ್ ಐ.ಡಿ., ರೇಷನ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಖಾತೆ, ಅಕ್ರಮ ಆಸ್ತಿಪಾಸ್ತಿ ಇತ್ಯಾದಿ ಇತ್ಯಾದಿಗಳೆಲ್ಲವುಗಳ ಮುಟ್ಟುಗೋಲಿಗೆ ಸರಕಾರವು ವಿಶೇಷ ಕಾರ್ಯಪಡೆ ರಚಿಸಬೇಕು.
ನಮ್ಮ ದೇಶದ ಬಡಜನತೆಯನ್ನು ಬಡತನರೇಖೆಯಿಂದ ಮೇಲೆತ್ತಲು ಸಕಾರಗಳು ನೀಡುತ್ತಿರುವ ಉಚಿತ ರೇಷನ್, ಉಚಿತ ಬಸ್ ಪಾಸ್, ಉಚಿತ ಪೆನ್‌ಷನ್, ಉಚಿತ ಆಸ್ಪತ್ರೆ ಸೌಲಭ್ಯಗಳು ಸೇರಿದಂತೆ ಇನ್ನಿತರ ಜನಕಲ್ಯಾಣ ಯೋಜನೆಗಳ ಲಾಭಗಳನ್ನು ಅಕ್ರಮ ಬಾಂಗ್ಲಾವಲಸಿಗರು ಪಡೆಯುವುದನ್ನು ತಡೆಗಟ್ಟಬೇಕು. ಭಾರತೀಯರು ಕಟ್ಟುವ ತೆರಿಗೆ ಹಣದಿಂದ ಆರಂಭಿಸಿರುವ ಯೋಜನೆಗಳ ಲಾಭವನ್ನು ಅಕ್ರಮ ಬಾಂಗ್ಲಾ ವಲಸಿಗರು ದೋಚಲು ಅವಕಾಶ ನೀಡಬಾರದು. ಅದಕ್ಕಾಗಿ ಅಕ್ರಮ ಬಾಂಗ್ಲಾ ವಲಸಿಗರನ್ನು ಕೂಡಲೇ ಈ ದೇಶದಿಂದ ಹೊರಗಟ್ಟಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿರುವ ಕಾರ್ಮಿಕರ ಕೊರತೆಯನ್ನು ನೀಗಿಸಲು ಸರ್ಕಾರವು ಕಾರ್ಮಿಕ ಇಲಾಖೆಯ ಮೂಲಕ ಕೊಡಗು ಜಿಲ್ಲೆ ಹಾಗೂ ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ವಿವಿಧ ರಾಜ್ಯಗಳ ಕಾರ್ಮಿಕ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಅಲ್ಲಿನ ನಿರುದ್ಯೋಗಿ ಕಾರ್ಮಿಕರಿಗೆ ಕೊಡಗು ಜಿಲ್ಲೆಯ ವಿವಿಧ ಭಾಗಗಳ ಅಗತ್ಯಕ್ಕೆ ತಕ್ಕಂತೆ ಕಾರ್ಮಿಕರ ಪೂರೈಕೆ ಮಾಡಲು ವ್ಯವಸ್ಥಿತ ಯೋಜನೆ ರೂಪಿಸಬೇಕು. ಆಮೂಲಕ ಕಾರ್ಮಿಕರ ಕೊರತೆಯನ್ನು ಸುಲಭವಾಗಿ ನೀಗಿಸಲು ಸ್ಥಳೀಯ ರೈತರು ಹಾಗೂ ತಜ್ಞರೊಂದಿಗೆ ಚರ್ಚಿಸಿ ಸರಿಯಾದ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಸುರಕ್ಷಾ ಆಂದೋಲನ ಸಮಿತಿರಾದ ರಾಬಿನ್ ದೇವಯ್ಯ, ರೂಪಾ, ಚಂದ್ರ ಉಡೋತ್ತು, ಪ್ರಮುಖರಾದ ದಿನೇಶ್ ಕುಮಾರ್ ಇದ್ದರು.