ಮಳೆಯ ನಡುವೆ ಸಂಭ್ರಮದ ಈದ್ ಮಿಲಾದ್ ಸಂದೇಶ ಘೋಷ ಯಾತ್ರೆ

Aug 26, 2026 - 14:05
 0  163
ಮಳೆಯ ನಡುವೆ ಸಂಭ್ರಮದ ಈದ್ ಮಿಲಾದ್ ಸಂದೇಶ ಘೋಷ ಯಾತ್ರೆ

ಸುಂಟಿಕೊಪ್ಪ; ಇಲ್ಲಿನ‌ ಹಲವು ಇಸ್ಲಾಂ ಮದರಸ ಮತ್ತು ಮಸೀದಿಗಳಲ್ಲಿ ಪ್ರವಾದಿ ಪೈಗಂಬರ್ ಅವರ ಜನ್ಮದಿನದ ಪ್ರತೀಕವಾದ ಈದ್ ಮಿಲಾದ್ ಹಬ್ಬವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಘೋಷ ಯಾತ್ರೆ‌ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಇಲ್ಲಿನ ಮುಸ್ಲಿಂ ಜಮಾಅತ್ , ಹನಫಿ ಜಮಾಅತ್, ಸುನ್ನಿಶಾಫಿ ಜುಮ್ಮಾ ಮಸೀದಿ,ಗದ್ದೆಹಳ್ಳದ ನೂರ್ ಜುಮ್ಮಾ ಮಸೀದಿಗಳಲ್ಲಿ ಮಂಗಳವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಯ ನಂತರ ಪಟ್ಟಣದ ಮದ್ಯಭಾಗದಲ್ಲಿರುವ ಮಸ್ಲಿಂ ಜಮಾಅತ್ ಮಸೀದಿಯ ಮುಂಭಾಗಕ್ಕೆ ಆಗಮಿಸಿ ಅಲ್ಲಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂದೇಶ ಘೋಷ ಯಾತ್ರೆಯು ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಡುತ್ತಾ, ಶಾಂತಿ ಸೌಹಾರ್ಧತೆಯ ಸಂದೇಶ ಸಾರುತ್ತಾ ಶಿಸ್ತು ಬದ್ಧವಾಗಿ ಮೆರವಣಿಗೆ ನಡೆಸಿದರು.

 ಎಲ್ಲ ಮಸೀದಿಗಳ ಮಕ್ಕಳು ಮತ್ತು ಯುವಕರ ತಂಡ ಭಾರಿ ಮಳೆಯ ಆರ್ಭಟದ ನಡುವೆ ನಡೆಸಿಕೊಟ್ಟ ಮುಸ್ಲಿಂ ಸಂಪ್ರದಾಯದ ದಫ್ ನೆರೆದಿದ್ದವರನ್ನು ಮನರಂಜಿಸಿತು.

ಮೆರವಣಿಗೆಯಲ್ಲಿ ಶ್ವೇತ ಬಣ್ಣದ ವಸ್ತ್ರದ ಜನಸಮೂಹ ಮತ್ತು ಹಸಿರು , ಕಪ್ಪು ಬಣ್ಣದ ವಸ್ತ್ರ ಧರಿಸಿದ ಯುವ ಪಡೆಯ ನಡೆ ಎಲ್ಲರನ್ನು ಆಕರ್ಷಿಸಿದಲ್ಲದೇ, ಬೃಹತ್ ಹಸಿರು ಬಾವುಟಗಳನ್ನು ಹಿಡಿದು ಹಾಡುತ್ತಿದ್ದ ಗಾನಸುಧೆಯು ಮನರಂಜಿಸಿತು.

ಶಾಂತಿ, ಸೌಹಾರ್ದ,ಸಹಭಾಳ್ವೆಯ ಪ್ರತೀಕವಾದ ಭಾವುಟ ರಾರಾಜಿಸಿತು.

ಪಟ್ಟಣದ ಮಸೀದಿಯಿಂದ ಹೊರಟ ಸಂದೇಶ ಘೋಷ ಯಾತ್ರೆಯು ಮಾದಾಪುರ ರಸ್ತೆಯವರೆಗೆ ಸಾಗಿ ಅಲ್ಲಿಂದ ಅಯ್ಯಪ್ಪ ದೇವಾಲಯದ ಬಳಿ ತೆರಳಿ ಆನಂತರ ಖತೀಜ ಉಮ್ಮ ಮದರಸದ ಬಳಿ ಸಮಾಪ್ತಿಗೊಂಡಿತು.

ರಸ್ತೆಯ ಇಕ್ಕೆಲಗಳಲ್ಲಿ ಮುಸ್ಲಿಂ ಮಹಿಳೆಯರು, ಯುವತಿಯರು ಮೆರವಣಿಗೆಯನ್ನು ವೀಕ್ಷಿಸಿ ಸಂತೋಷಪಟ್ಟರು.

ನಂತರ ನಡೆದ ಸಭಾ ಕಾರ್ಯಕ್ರಮದ ಲ್ಲಿ ದೂರ ದೂರದಿಂದ ಬಂದಿದ್ದ ಧಾರ್ಮಿಕ ಮುಖಂಡರುಗಳು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಸಂದೇಶವನ್ನು ತಿಳಿಸಿದರು.ನಂತರ ಮಕ್ಕಳಿಂದ ದಫ್ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿತು.

ಈ ಸಂದರ್ಭ ವಿವಿಧ ಮಸೀದಿಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮೌಲ್ವಿಗಳು ಇದ್ದರು.

ನೆರೆದಿದ್ದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ಮೆರವಣಿಗೆಯಲ್ಲಿ ಪಟ್ಟಣದ ಸುಂಟಿಕೊಪ್ಪ ಮುಸ್ಲಿಂ ಜಮಾಅತ್ ನೌಷದ್ ಜುಹಾರಿ,ಸುನ್ನಿ ಹನಫಿ ಮುಸ್ಲಿಂ ಜಾಮೀಯ ಮಸೀದಿಯ ಮೌಲಾನ ಜುಬ್ಬೇರ್ ಅಜಾರತ್, ಸುನ್ನಿಶಾಫಿ ಜುಮ್ಮಾ ಮಸ್ಜಿದ್ ಧಾರ್ಮಿಕ ಮೌಲವಿ ಹಾಗೂ ಗದ್ದೆಹಳ್ಳದ ನೂರುಜುಮ್ಮ ಮಸ್ಜಿದ್ ನ ಅಬ್ಧುಲ್ ಅಜೀಜ್ ಸಖಾಫಿ, ಮುಖಂಡರಾದ ಕೆ.ಎಂ.ಇಬ್ರಾಹಿಂ, ಪಿ.ಎಂ.ಲತೀಫ್,ಸಿ.ಎಂ.ಹಮೀದ್ ಮೌಲ್ವಿ, ರಫೀಕ್,ಆರ್.ಹೆಚ್.ಶರೀಫ್, ಉಸ್ಕಾನ್ ,ಕೆ.ಇ.ಕರೀಂ,ಅಬ್ದುಲ್ ಅಜೀಜ್,ರಜಾಕ್ ಸೇರಿದಂತೆ ಎಲ್ಲ ಮಸೀದಿಗಳ ಧರ್ಮಗುರುಗಳು ಹಾಜರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0