Kodagu

ಶ್ರೀ ದಕ್ಷಿಣ ಮತ್ತು ಅಂಗಳ ಪರಮೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ವಿಜೃಂಭಣೆಯ ವರಮಹಾಲಕ್ಷ್ಮಿ ಪೂಜೋತ್ಸವ, ಅನ್ನಸಂತರ್ಪಣೆ

admincoorgdaily

ಶ್ರೀ ದಕ್ಷಿಣ ಮತ್ತು ಅಂಗಳ ಪರಮೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ವಿಜೃಂಭಣೆಯ ವರಮಹಾಲಕ್ಷ್ಮಿ ಪೂಜೋತ್ಸವ, ಅನ್ನಸಂತರ್ಪಣೆ

ವಿರಾಜಪೇಟೆ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ವಿರಾಜಪೇಟೆಯ ಶ್ರೀ ದಕ್ಷಿಣ ಮಾರಿಯಮ್ಮ ಮತ್ತು ಅಂಗಳ ಪರಮೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿಶೇಷ ಪೂಜೋತ್ಸವ ಹಾಗೂ ಭವ್ಯ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನೆರವೇರಿತು.

 ದೇವಸ್ಥಾನದ ಟ್ರಸ್ಟ್ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಉತ್ಸವದಲ್ಲಿ ಶ್ರೀ ದಕ್ಷಿಣ ಮಾರಿಯಮ್ಮ ಮತ್ತು ಅಂಗಳ ಪರಮೇಶ್ವರಿ ದೇವಿಗೆ ವರಮಹಾಲಕ್ಷ್ಮಿ ದಿವ್ಯ ರೂಪದಲ್ಲಿ ವಿಶೇಷ ಪುಷ್ಪಾಲಂಕಾರ ಹಾಗೂ ಶೋಡಶೋಪಚಾರ ಪೂಜೆಗಳನ್ನು ಸಲ್ಲಿಸಲಾಯಿತು.

ಬಳಿಕ ನಾಡಿನ ಕ್ಷೇಮ ಮತ್ತು ಭಕ್ತಾದಿಗಳ ಇಷ್ಟಾರ್ಥ ಸಿದ್ಧಿಗಾಗಿ ಮಹಾಮಂಗಳಾರತಿ ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮಗಳ ನಂತರ ದೇವಸ್ಥಾನ ಟ್ರಸ್ಟ್ ವತಿಯಿಂದ ಆಗಮಿಸಿದ್ದ ನೂರಾರು ಭಕ್ತಾದಿಗಳಿಗೆ ವಿಜೃಂಭಣೆಯ ಮಹಾ ಅನ್ನಸಂತರ್ಪಣೆ (ಮಹಾಪ್ರಸಾದ) ಆಯೋಜಿಸಲಾಗಿತ್ತು. ಬೆಳಿಗ್ಗೆಯಿಂದಲೇ ನೂರಾರು ಮುತ್ತೈದೆಯರು ಹಾಗೂ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ತೀರ್ಥ-ಪ್ರಸಾದ ಸ್ವೀಕರಿಸಿದರು.

ಇದರೊಂದಿಗೆ, ಶಿವಕೇರಿಯಲ್ಲಿರುವ ಶ್ರೀ ವಿಷ್ಣುಮೂರ್ತಿ ದುರ್ಗಿ ದೇವಸ್ಥಾನ ಹಾಗೂ ಶ್ರೀ ಗಣಪತಿ ದೇವಾಲಯ ಸೇರಿದಂತೆ ವಿರಾಜಪೇಟೆಯ ಸುತ್ತಮುತ್ತಲಿನ ವಿವಿಧ ಧಾರ್ಮಿಕ ಕೇಂದ್ರಗಳಲ್ಲೂ ವರಮಹಾಲಕ್ಷ್ಮಿ ವ್ರತ ಹಾಗೂ ಪೂಜಾ ವಿಧಿವಿಧಾನಗಳು ಸಂಭ್ರಮದಿಂದ ಜರುಗಿದವು. ಇದೇ ಸಂದರ್ಭ ಮಾರಿಯಮ್ಮ ದೇಗುಲದಲ್ಲಿ ಮುತೈದೆಯರಿಗೆ ಅರಶಿಣ ಕುಂಕುಮ, ಬಳೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಂಗಾಳ ಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಪಿ. ಕೃಷ್ಣ, ಉಪಾಧ್ಯಕ್ಷ ಟಿ.ಜಿ ಮಂಜುನಾಥ್, ಶಂಕರ್ ಶೆಟ್ಟಿ, ಮಹೇಶ್ ಶೆಟ್ಟಿ, ಅಯ್ಯಪ್ಪ ಶೆಟ್ಟಿ, ಲೋಕೇಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಮಂಜುನಾಥ್, ಷಣ್ಮುಗ ಶೆಟ್ಟಿ ಹರೀಶ್ ಶೆಟ್ಟಿ, ಭರತ್ ಶೆಟ್ಟಿ, ರಂಜಿತ್ ಶೆಟ್ಟಿ, ಟಿ.ಎನ್. ವೆಂಕಟೇಶ್ ಶೆಟ್ಟಿ, ಸೇರಿದಂತೆ ಹತ್ತು ಕುಲಸ್ಥರು, 24 ಮನೆ ಸಾಧು ಚೆಟ್ಟಿಯಾರ್ ಕುಟುಂಬದ ಎಲ್ಲ ಸದಸ್ಯರು, ವಿರಾಜಪೇಟೆ ಹಾಗೂ ಸುತ್ತಮುತ್ತಲ ಭಕ್ತಾಧಿಗಳು ಪಾಲ್ಗೊಂಡಿದ್ದರು.