ಪತ್ರಕರ್ತನು ತನ್ನ ಪದವಿಯಿಂದಲ್ಲ,ತನ್ನ ಕಾರ್ಯದಿಂದ ಗುರುತಿಸಲ್ಪಡುತ್ತಾನೆ:ಹಿರಿಯ ಪತ್ರಕರ್ತ ಹೃಷಿಕೇಷ್ ಬಹದ್ದೂರ್
ಮಡಿಕೇರಿ: ಪತ್ರಕರ್ತನಿಗೆ ಸಮಾಜಮುಖಿ ಬದ್ಧತೆ, ಸತ್ಯನಿಷ್ಠೆ ಮತ್ತು ಜನಪರ ಕಾಳಜಿ ಮುಖ್ಯ. ಪತ್ರಕರ್ತನು ತನ್ನ ಪದವಿಯಿಂದಲ್ಲ, ತನ್ನ ಕಾರ್ಯದಿಂದ ಗುರುತಿಸಲ್ಪಡುತ್ತಾನೆ ಎಂದು ಬೆಳಗಾವಿ ಆವೃತ್ತಿಯ ದಿ ಹಿಂದೂ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಹೃಷಿಕೇಶ್ ಬಹದ್ದೂರ್ ದೇಸಾಯಿ ಹೇಳಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಾಗಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪತ್ರಿಕಾ ದಿನವು ಕೇವಲ ಸಂಭ್ರಮದ ದಿನವಲ್ಲ, ಆತ್ಮಾವಲೋಕನ ಮಾಡಿಕೊಳ್ಳುವ ದಿನವೂ ಹೌದು. ಕೃತಕ ಬುದ್ಧಿಮತ್ತೆ (ಎಐ) ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಸಾಂಪ್ರದಾಯಿಕ ಮಾಧ್ಯಮಗಳು ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಿವೆ. ‘ಎಐ’ನಂತಹ ಅವಿಷ್ಕಾರಗಳು ಪತ್ರಕರ್ತರು ಪ್ರಶ್ನಿಸುವ ಮನೋಭಾವವನ್ನೇ ಕಸಿಯುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೂ ಪರಿಣಾಮ ಬೀರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂದು ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳು ಸುಮಾರು 30 ಬಿಲಿಯನ್ ಡಾಲರ್‌ಗಳ ಜಾಹೀರಾತು ಆದಾಯ ಗಳಿಸುತ್ತಿವೆ. ಆದರೆ ಜಗತ್ತಿನ ಅಗ್ರಗಣ್ಯ ಮಾಧ್ಯಮ ಸಂಸ್ಥೆಗಳಿಗೂ ಇಷ್ಟೊಂದು ಪ್ರಮಾಣದ ಜಾಹೀರಾತು ದೊರೆಯುತ್ತಿಲ್ಲ. ಇದರೊಂದಿಗೆ ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಪರ್ಯಾಸವಾಗಿದೆ. ಬಹುತೇಕ ಮಾಧ್ಯಮ ಸಂಸ್ಥೆಗಳು ಸವಾಲಿನೊಂದಿಗೆ ಆದಾಯದ ಕೊರತೆಯನ್ನು ಎದುರಿಸುತ್ತಿವೆ ಎಂದರು.
ಒಂದು ಕಾಲದಲ್ಲಿ ಜನರು ಸರ್ಕಾರಕ್ಕಿಂತಲೂ ಹೆಚ್ಚು ಮಾಧ್ಯಮಗಳನ್ನು ನಂಬುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಪತ್ರಿಕಾ ಸ್ವಾತಂತ್ರ್ಯದ ಕುರಿತ ಪ್ರಶ್ನೆಗಳು ಉದ್ಭವಿಸುತ್ತಿವೆ. ಪ್ರತಿಯೊಬ್ಬ ಪ್ರಜೆಯೂ ಪತ್ರಕರ್ತನಾಗಬಹುದು ಎಂಬ ಆಶಯ ಪತ್ರಿಕೋದ್ಯಮದಲ್ಲಿದೆ. ಇತರ ವೃತ್ತಿಗಳಿಗೆ ಪದವಿ ಅಗತ್ಯ. ಪತ್ರಕರ್ತನಾಗಲು ಸಾಮಾಜಿಕ ಬದ್ಧತೆ ಮುಖ್ಯವಾಗುತ್ತದೆ. ಯಾವ ಹಿನ್ನೆಲೆಯಿಂದ ಬಂದವರಾದರೂ ವೃತ್ತಿಯನ್ನು ಗೌರವಿಸಿ ಸಮಾಜಕ್ಕೆ ನ್ಯಾಯ ಒದಗಿಸುವ ಹೊಣೆಗಾರಿಕೆ ಹೊಂದಿರಬೇಕು ಕಿವಿಮಾತನಾಡಿದರು.
ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳನ್ನು ಬಳಸಬೇಡಿ ಎನ್ನುವವರೇ ಅವುಗಳನ್ನು ಹೆಚ್ಚು ಬಳಸುತ್ತಿರುವುದು ವಾಸ್ತವ. ಆದ್ದರಿಂದ ತಂತ್ರಜ್ಞಾನವಿಲ್ಲದ ಸಮಾಜವನ್ನು ನಿರ್ಮಿಸುವುದು ಅಸಾಧ್ಯ. ತಂತ್ರಜ್ಞಾನವು ದೀಪದಂತಿದ್ದು, ಅದನ್ನು ಅಡುಗೆಗೆ ಬಳಸಬಹುದು, ಬೆಂಕಿ ಹಚ್ಚಲೂ ಬಳಸಬಹುದು. ಅದರ ಬಳಕೆ ನಮ್ಮ ಜವಾಬ್ದಾರಿಯ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.
ಸಮಾಜದ ಆಗುಹೋಗುಗಳನ್ನು ಕುತೂಹಲದಿಂದ ಅರಿತು ಜನರಿಗೆ ತಲುಪಿಸುವುದೇ ನಿಜವಾದ ಪತ್ರಿಕೋದ್ಯಮ. ಪತ್ರಿಕೆಗಳು ಜನಸಾಮಾನ್ಯರ ವಿಶ್ವವಿದ್ಯಾನಿಲಯವಾಗಬೇಕು. ಜನರ ಸಮಸ್ಯೆಗಳಿಂದ ಮಾಧ್ಯಮಗಳು ದೂರವಾದರೆ, ಜನರೂ ಮಾಧ್ಯಮಗಳಿಂದ ದೂರವಾಗುತ್ತಾರೆ. ಆದ್ದರಿಂದ ಪತ್ರಿಕೋದ್ಯಮವು ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಜನರ ಮನೋಸ್ಥೈರ್ಯ ಹೆಚ್ಚಿಸುವ ಕಾರ್ಯವನ್ನು ನಿರಂತರವಾಗಿ ನಿರ್ವಹಿಸಬೇಕು ಎಂದು ಹೃಷಿಕೇಶ್ ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಪತ್ರಕರ್ತರು ಸದಾ ವೃತ್ತಿಯ ಒತ್ತಡದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಸಮಾಜದ ಎಲ್ಲ ವರ್ಗಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಶ್ರಮಜೀವಿಗಳಾಗಿದ್ದಾರೆ. ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಜೀವನಶೈಲಿಯೂ ಬದಲಾಗುತ್ತಿದೆ. ಸಮಾಜದಿಂದ ದೊರೆಯುವ ಪ್ರೋತ್ಸಾಹ ಮತ್ತು ಗೌರವವು ಇನ್ನಷ್ಟು ಉತ್ತಮ ಸಾಧನೆ ಮಾಡಲು ಹುರಿದುಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳು ತಮ್ಮ ಜವಾಬ್ದಾರಿಗಳನ್ನು ಅರಿತು ಸಾಧಕರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೊಡಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಎದುರಿಸದಿರುವುದು ಬೇಸರದ ಸಂಗತಿ. ಇದರ ಪರಿಣಾಮವಾಗಿ ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಯುವಜನತೆ ಸರ್ಕಾರಿ ಸೇವೆಗಳು ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಕರೆ ನೀಡಿದರು.
ಇಂದಿನ ಝೆನ್ಸಿ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾದ ಸಮಯ ವ್ಯಯಿಸುವುದನ್ನು ತಪ್ಪಿಸಬೇಕು. ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಪೋಷಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಹೊಂದಿದೆ. ಸಮಾಜದಲ್ಲಿನ ತಪ್ಪುಗಳನ್ನು ತಿದ್ದಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ನಿರ್ವಹಿಸಬೇಕು. ಪ್ರತಿಯೊಬ್ಬರೂ ದೇಶಪ್ರೇಮ ಬೆಳೆಸಿಕೊಂಡು ರಾಷ್ಟçದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.
ಸಮಾಜ ಸೇವಕ ಹಾಗೂ ಉದ್ಯಮಿ ಎಡಿಕೇರಿ ಪ್ರಸನ್ನ ಮಾತನಾಡಿ, ಪತ್ರಿಕೆಗಳ ಮೂಲಕ ಸಮಾಜಕ್ಕೆ ನಿಖರ ಮಾಹಿತಿಯನ್ನು ತಲುಪಿಸುವ ಪತ್ರಕರ್ತರು ತಮ್ಮ ವೃತ್ತಿಯ ಕಾರಣದಿಂದ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಪತ್ರಕರ್ತರ ಸೇವೆಯನ್ನು ಸಮಾಜ ಗುರುತಿಸಿ, ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಗೌರವ ನೀಡಬೇಕು. ಪತ್ರಕರ್ತರ ಬದುಕಿನಲ್ಲಿ ಏಳು-ಬೀಳುಗಳು ಸಹಜವಾಗಿದ್ದರೂ, ಸಮಾಜದ ಹಿತಕ್ಕಾಗಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಪತ್ರಕರ್ತರ ಮಕ್ಕಳ ಶೈಕ್ಷಣಿಕ ಸಾಧನೆ ಶ್ಲಾಘನೀಯವಾಗಿದೆ. ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಶ್ರಮವಹಿಸಿ ಶಿಕ್ಷಣದಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳೇ ದೇಶದ ಅಮೂಲ್ಯ ಆಸ್ತಿ ಎಂಬುದನ್ನು ಎಲ್ಲರೂ ಮನಗಾಣಬೇಕು. ಆರೋಗ್ಯ ಮತ್ತು ಶಿಕ್ಷಣ ದುಬಾರಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಶಿಕ್ಷಣ ಉಚಿತವಾಗಿ ದೊರೆಯುವಂತಾಗಬೇಕು. ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ಅಗತ್ಯ ಮೂಲಸೌಕರ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್. ಸವಿತಾ ರೈ, ಕಳೆದ ಹಲವು ವರ್ಷಗಳಿಂದ ಪತ್ರಕರ್ತರ ಮಕ್ಕಳನ್ನು ಗುರುತಿಸಿ ಗೌರವಿಸಿ ಅವರ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸುತ್ತ ಬರಲಾಗುತ್ತಿದೆ. ಮಕ್ಕಳು ಮನ್ನಷ್ಟು ಸಾಧನೆ ಮಾಡಿ ಸಮಾಜದ ಸತ್ಪ್ರಜೆಯಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, 1843ರಲ್ಲಿ ಕರ್ನಾಟಕದಲ್ಲಿ ಮೊದಲು ಮಂಗಳೂರು ಸಮಾಚಾರ ಎಂಬ ಕನ್ನಡ ಪತ್ರಿಕೆ ಆರಂಭವಾಯಿತು. ಈ ಪ್ರಯುಕ್ತ ಪತ್ರಿಕಾ ದಿನವನ್ನು ಆಚರಿಸಲಾಗುತ್ತಿದೆ. ಮಾಧ್ಯಮಗಳು ಸಮಾಜದ ಕನ್ನಡಿಯಾಗಿದ್ದು, ದಾಖಲೆಯಾಗಿ ಉಳಿದುಕೊಳ್ಳುತ್ತದೆ ಎಂದರು.
ಸನ್ಮಾನ - ಪ್ರತಿಭಾ ಪುರಸ್ಕಾರ
ಪತ್ರಿಕಾ ದಿನದ ಅಂಗವಾಗಿ ಗೋಣಿಕೊಪ್ಪ ಭಾಗದ ಪತ್ರಿಕಾ ವಿತರಕ ಕೆ.ಕೆ. ವಿನೋದ್ ಹಾಗೂ ಇತ್ತೀಚಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಕೊಡಮಾಡುವ ತೆರೆಮರೆ ಸಾಧಕ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ, ಮಾಧ್ಯಮ ಸ್ಪಂದನ ತಂಡದ ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
೧ನೇ ತರಗತಿಗೆ ಮೇಲ್ಪಟ್ಟ ವಿವಿಧ ಹಂತದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ಒಟ್ಟು ೨೨ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ದೇಚಮ್ಮ ಅಯ್ಯಪ್ಪ, ಧರುಣ್ ಪ್ರಶೋಬ್, ನಂದಿತಾ ಎಸ್ ಗೌಡ, ಎಸ್. ಆರ್ವಿ, ಆರ್. ಸಮರ್ಥ್, ರಾಗ ಹೆಚ್ ಶೆಟ್ಟಿ, ಪರಿಧಿ ಪೊನ್ನಮ್ಮ, ಶಶಾಂಕ್ ಸೋಮಯ್ಯ, ಎಂ ತುಶಾಲಿ, ಪಿ.ಎ. ಆರೋನ್, ಎಸ್.ಪಿ. ಚಿತ್ತಾರ, ಎಸ್.ಪಿ. ಇಂಚರ, ಕೆ.ಜಿ. ಶಿವಾನಿ, ವಿ.ಎ. ಚಿಂತನ್, ನಿವೇದ್ ಬಾಲಾಜಿ, ಕೆ.ಎಸ್. ಲಕ್ಷಿತಾ, ಪ್ರೀಷ, ಇಂಚರ ಎ, ಚೈತನ್ಯ ಸಿ ಮೋಹನ್, ಎಂ.ಸಿ. ವಿಷ್ಣುವರ್ಧನ್, ಎ.ವಿ. ಸಮೃದ್ಧಿ, ತಿಷ್ಯಾ ಪೊನ್ನೇಟಿ ಅವರುಗಳು ಪ್ರತಿಭಾ ಪುರಸ್ಕಾರ ಪಡೆದುಕೊಂಡರು.
ಸಮೃದ್ಧಿ ವಾಸು ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಸ್ವಾಗತಿಸಿ, ನಿರೂಪಿಸಿ, ಉಪಾಧ್ಯಕ್ಷ ವಾಸು ವಂದಿಸಿದರು. ಜಗದೀಶ್ ಜೋಡುಬೀಟಿ, ಚನ್ನನಾಯಕ, ರವಿಕುಮಾರ್, ಪ್ರಭುದೇವ್ ಅತಿಥಿ ಪರಿಚಯ ಮಾಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
