ಕರಡ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬ

Jan 25, 2026 - 14:35
Jan 25, 2026 - 14:37
 0  299
ಕರಡ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು: ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಚೆಯ್ಯಂಡಾಣೆ ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

 ಶಾಲೆಯ ಎಸ್ ಡಿಎಂಸಿ ಅಧ್ಯಕ್ಷೆ ನೇತ್ರಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಸರ್ಕಾರಿ ಶಾಲೆಯ ಉಳಿವಿಗಾಗಿ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.

ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಲು ಆಯೋಜಿಸುವ ಇಂತಹ ಕಾರ್ಯಕ್ರಮದಿಂದ ಪ್ರತಿ ಮಗುವಿನ ಜೀವನದಲ್ಲಿ ಒಂದು ಉತ್ತಮ ಪಾಠವಾಗಲಿದೆ. ಸರ್ಕಾರಿ ಶಾಲೆಯ ಮಕ್ಕಳ ಕಲಿಕಾ ಚೇತರಿಕೆಗೆ ಹಾಗೂ ಮಕ್ಕಳ ಜೀವನಕ್ಕೆ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದರು.

ನರಿಯಂದಡ ಗ್ರಾ.ಪಂ.ಸದಸ್ಯ ಬೇಪಡಿಯಂಡ ವಿಲಿನ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಗುಣಮಟ್ಟ ಹೆಚ್ಚಿಸಿಕೊಂಡು ತಮ್ಮ ಜೀವನದ ಸಾಧನೆಗಳಲ್ಲಿ ಯಶಸ್ಸನ್ನು ಕಂಡು ಕೊಳ್ಳಬೇಕೆಂದರು. ಶಾಲೆಯ ಸ್ಥಳ ದಾನಿಗಳಾದ ಬಿದ್ದೇರಿಯಂಡ ದೇವಯ್ಯ ಹಾಗೂ ಕಡಂಗ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹೇಮಾವತಿ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.

 ಚೆಯ್ಯಂಡಾಣೆ ಕ್ಲಸ್ಟರ್ ನ ಸಿಆರ್ ಪಿ ಪವಿತ್ರ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಯೊಂದು ಮಗುವಿಗೆ ತನ್ನ ಎಂಟು ವರ್ಷದ ಅವಧಿ ಅವರ ಭವಿಷ್ಯವನ್ನು ನಿರ್ಧರಿಸುವ ಕಾಲಘಟ್ಟವಾಗಿದೆ. ಈ ಅವಧಿಗಳಲ್ಲಿ ಮಗುವಿನ ಮನಸ್ಸಿನಲ್ಲಿ ಬಿತ್ತುವ ಕಲಿಕೆಗಳು ನೆನಪಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿರುತ್ತದೆ,ಪ್ರತಿಯೊಬ್ಬ ಮಗು ಭದ್ರಬುನಾದಿ ಹಾಕುವ ವಯಸ್ಸು ಇದಾಗಿದ್ದು ಆ ನಿಟ್ಟಿನಲ್ಲಿ ಮಗುವಿನ ಶೈಕ್ಷಣಿಕ ಕಲಿಕಾ ಪ್ರಯಾಣದ ಸಾಮರ್ಥ್ಯದಲ್ಲಿ ಓದು,ಬರವಣಿಗೆ, ಸಂಖ್ಯಾ ಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಕಲಿಕಾ ಹಬ್ಬದಲ್ಲಿ ಚೆಯ್ಯಂಡಾಣೆ ಕ್ಲಸ್ಟರ್ ಗೆ ಒಳಪಟ್ಟ 12 ಪ್ರಾಥಮಿಕ ಶಾಲೆಯ ಒಟ್ಟು 120ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದರು.

ಈ ಸಂದರ್ಭ ಎಸ್ ಡಿಎಂಸಿ ಸದಸ್ಯರು,12 ಶಾಲೆಯ ಶಿಕ್ಷಕ ವೃಂದದವರು,ಸ್ಥಳೀಯ ಅಂಗನವಾಡಿ,ಆಶಾ ಕಾರ್ಯಕರ್ತೆಯರು, ಪೋಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಚೆಯ್ಯಂಡಾಣೆ ಶಾಲೆಯ ಶಿಕ್ಷಕಿ ಜಯಪ್ರದ ನಿರೂಪಿಸಿ,ಮುಖ್ಯ ಶಿಕ್ಷಕಿ ಲೀಲಾವತಿ ಸ್ವಾಗತಿಸಿ ಸರ್ವರನ್ನು ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0