Kodagu

ಕಕ್ಕಬ್ಬೆ -ನೆಲಜಿ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ಉರುಳಿಬಿದ್ದ ಮರ;ಚಾಲಕನಿಗೆ ಗಂಭೀರ ಗಾಯ

admincoorgdaily

ಕಕ್ಕಬ್ಬೆ -ನೆಲಜಿ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ಉರುಳಿಬಿದ್ದ ಮರ;ಚಾಲಕನಿಗೆ ಗಂಭೀರ ಗಾಯ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು : ಚಲಿಸುತ್ತಿದ್ದ ಆಟೋರಿಕ್ಷಾದ ಮೇಲೆ ಮರವೊಂದು ಉರುಳಿ ಬಿದ್ದಪರಿಣಾಮ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ನಾಪೋಕ್ಲು ಬಳಿಯ ಕಕ್ಕಬ್ಬೆ ನೆಲಜಿ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ. 

ಕಕ್ಕಬ್ಬೆ ಕುಂಜಿಲ ಗ್ರಾಮದ ನಿವಾಸಿ ಆಟೋ ಚಾಲಕ ಪಿ. ಎ.ಮಹಮೂದ್ ಎಂಬುವವರು ಗುರುವಾರ ರಾತ್ರಿ ತಮ್ಮ ಆಟೋದಲ್ಲಿ ಕಕ್ಕಬೆಯಿಂದ ನೆಲಜಿ ಕಡೆಗೆ ಪ್ರಯಾಣಿಕರನ್ನು ಹೊತ್ತು ಬಾಡಿಗೆ ತೆರಳಿ ಹಿಂತಿರುಗಿ ಬರುವ ಸಂದರ್ಭ ಆಕಸ್ಮಿಕವಾಗಿ ರಸ್ತೆ ಬದಿಯ ತೋಟದಿಂದ ಮರವೊಂದು ಆಟೋರಿಕ್ಷಾದ ಮೇಲೆ ಉರುಳಿ ಬಿದ್ದಿದೆ.

ಅವಘಡದಿಂದ ಚಾಲಕ ಮಹಮೂದ್ ಅವರ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆನೀಡಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು ಅದೃಷ್ಟ ವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆಟೋದ ಮೇಲಿದ್ದ ಮರವನ್ನು ತೆರವುಗೊಳಿಸಿದ ಸ್ಥಳೀಯರು ಗಾಯಾಳುಗಳನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಮರ ಬಿದ್ದ ಪರಿಣಾಮ ಆಟೋರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು ವಿದ್ಯುತ್ ಕಂಬಕ್ಕೂಹಾನಿಯಾಗಿದೆ.ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.