ಲಾಡ್ಜ್‌ನಲ್ಲಿ ಪ್ರೇಯಸಿಯೊಂದಿಗೆ ರೂಂ ಮಾಡಿಕೊಂಡಿದ್ದ ಯುವಕ 9ನೇ ದಿನ ಶವವಾಗಿ ಪತ್ತೆ!

Oct 18, 2025 - 18:44
 0  5k
ಲಾಡ್ಜ್‌ನಲ್ಲಿ ಪ್ರೇಯಸಿಯೊಂದಿಗೆ ರೂಂ ಮಾಡಿಕೊಂಡಿದ್ದ ಯುವಕ 9ನೇ ದಿನ ಶವವಾಗಿ ಪತ್ತೆ!

ಬೆಂಗಳೂರು, ಅ.18: ನಗರದ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗ್ಯಾಂಡ್ ಚಾಯ್ಸ್ ಲಾಡ್ಜ್ನಲ್ಲಿ ನಡೆದ ಯುವಕನ ನಿಗೂಢ ಸಾವು ಪ್ರಕರಣವು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪುತ್ತೂರು ಮೂಲದ ತಕ್ಷಿತ್ (20) ಎಂಬ ಯುವಕ ತನ್ನ ಪ್ರೇಯಸಿ ವಿರಾಜಪೇಟೆಯ ರಕ್ಷಿತಾ ಅವರೊಂದಿಗೆ ಎಂಟು ದಿನಗಳಿಂದ ಲಾಡ್ಜ್‌ನಲ್ಲಿ ಜೊತೆಗಿದ್ದು, ಒಂಭತ್ತನೇ ದಿನ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ, ಅಕ್ಟೋಬರ್ 9ರಂದು ತಕ್ಷಿತ್ ಮತ್ತು ರಕ್ಷಿತಾ ಬೆಂಗಳೂರಿಗೆ ಆಗಮಿಸಿ, “ಕಾಲೇಜು ಸಂಬಂಧಿತ ಕೆಲಸ” ಎಂದು ಹೇಳಿ ಲಾಡ್ಜ್‌ಗೆ ಚೆಕ್‌ಇನ್ ಮಾಡಿದ್ದರು. ಅವರು ಹೊರಗಡೆಯಿಂದ ಆಹಾರ ತರಿಸಿಕೊಂಡು ಸೇವಿಸುತ್ತಿದ್ದರು. ಅಕ್ಟೋಬರ್ 17ರ ರಾತ್ರಿ ಸ್ವಿಗ್ಗಿಯಿಂದ ಆಹಾರ ಆರ್ಡರ್ ಮಾಡಿ ಸೇವಿಸಿದ ನಂತರ ಇಬ್ಬರಿಗೂ ಅಸ್ವಸ್ಥತೆ ಉಂಟಾದ ಹಿನ್ನೆಲೆಯಲ್ಲಿ, ಮೆಡಿಕಲ್ ಸ್ಟೋರ್‌ನಿಂದ ಮಾತ್ರೆಗಳನ್ನು ತಂದು ಸೇವಿಸಿದ್ದರೆಂದು ತನಿಖಾ ಮೂಲಗಳು ತಿಳಿಸಿವೆ.

ಮರುದಿನ ಬೆಳಿಗ್ಗೆ ತಕ್ಷಿತ್ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ರಕ್ಷಿತಾ ಲಾಡ್ಜ್‌ನಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಲಾಡ್ಜ್ ಸಿಬ್ಬಂದಿ, “ಇಬ್ಬರೂ ಅಕ್ಟೋಬರ್ 9ರಂದು ಮಧ್ಯಾಹ್ನ ಚೆಕ್‌ಇನ್ ಮಾಡಿಕೊಂಡಿದ್ದರು. ಪಾವತಿ ಸಮಯಕ್ಕೆ ಮಾಡುತ್ತಿದ್ದರು. ನಿನ್ನೆ ರಾತ್ರಿ ಯುವಕ ಮೃತಪಟ್ಟಿರುವುದು ಬೆಳಿಗ್ಗೆ ತಿಳಿಯಿತು,” ಎಂದು ತಿಳಿಸಿದ್ದಾರೆ.

ಮಡಿವಾಳ ಪೊಲೀಸರು ಪ್ರಕರಣವನ್ನು ಯುಡಿಆರ್ (Unnatural Death Report) ಅಡಿಯಲ್ಲಿ ದಾಖಲಿಸಿಕೊಂಡು, ತಕ್ಷಿತ್‌ನ ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

What's Your Reaction?

Like Like 9
Dislike Dislike 0
Love Love 3
Funny Funny 2
Angry Angry 0
Sad Sad 9
Wow Wow 2