State News

ಫೋಟೋ ಕೇಳಿದ್ದಕ್ಕೆ ಬಳೆಯನ್ನೇ ನೀಡಿದ ಯುವತಿ

admincoorgdaily

Photo credit: TV09(ಯುವತಿ ನೀಡಿದ ಬಳೆ)

ಬೆಂಗಳೂರು, ಜನವರಿ 16: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸಹಪ್ರಯಾಣಿಕಳೊಬ್ಬಳು ಇಷ್ಟಪಟ್ಟ ಬಳೆಯ ಫೋಟೋ ಕೇಳಿದ್ದಕ್ಕೆ ಯುವತಿಯೊಬ್ಬಳು ತನ್ನ ಕೈಯಲ್ಲಿದ್ದ ಬಳೆಯನ್ನೇ ನೀಡಿ ಮಾನವೀಯತೆ ಮೆರೆದ ಘಟನೆ ನಡೆದಿದೆ.

ಮೆಟ್ರೋ ಪ್ರಯಾಣದ ವೇಳೆ ಪಕ್ಕದಲ್ಲೇ ಕುಳಿತಿದ್ದ ಯುವತಿಯ ಕೈಯಲ್ಲಿದ್ದ ಬಳೆ ಮಹಿಳೆಯೊಬ್ಬರಿಗೆ ಇಷ್ಟವಾಗಿದೆ. ಅದೇ ವಿನ್ಯಾಸದ ಬಳೆ ಮಾಡಿಸಿಕೊಳ್ಳುವ ಉದ್ದೇಶದಿಂದ ಫೋಟೋ ತೆಗೆದುಕೊಳ್ಳಬಹುದೇ ಎಂದು ಕೇಳಿದಾಗ, ಯುವತಿ ತನ್ನ ಕೈಯಲ್ಲಿದ್ದ ಬಳೆಯನ್ನೇ ತೆಗೆದು ನೀಡಿದ್ದಾಳೆ. ಇದರಿಂದ ಅಕ್ಕಸಾಲಿಗನಿಗೆ ವಿನ್ಯಾಸ ಸುಲಭವಾಗಿ ಅರ್ಥವಾಗುತ್ತದೆ ಎಂದು ಯುವತಿ ತಿಳಿಸಿದ್ದಾಳೆ.

ಈ ಅಪ್ರತೀಕ್ಷಿತ ನಡೆ ಮಹಿಳೆಯನ್ನು ಆಶ್ಚರ್ಯಕ್ಕೆ ಒಳಪಡಿಸಿದೆ. ಬಳಿಕ ಆ ಬಳೆ ಬಂಗಾರದದ್ದಲ್ಲ ಎಂದು ಯುವತಿ ನಗುತ್ತಲೇ ಹೇಳಿದ್ದಾಳೆ. ಯುವತಿಯ ದಯಾಗುಣದ ನೆನಪಿಗಾಗಿ ಮಹಿಳೆ ಆ ಬಳೆಯನ್ನು ಸ್ವೀಕರಿಸಿದ್ದಾಳೆ.

ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬರಹ ಗಮನ ಸೆಳೆದಿದ್ದು, ಯುವತಿಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ. ನಿತ್ಯದ ನೂಕುನುಗ್ಗಲು ಮತ್ತು ಗದ್ದಲದ ನಡುವೆಯೂ ಮಾನವೀಯ ಮೌಲ್ಯಗಳು ಉಳಿದಿವೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.