CRIME

ಪರಿತ್ಯಕ್ತ ಪತ್ನಿ ಹತ್ಯೆ; ಮೃತದೇಹದೊಂದಿಗೆ ಸೆಲ್ಫಿ ಹಾಕಿದ ಪತಿಯ ಬಂಧನ : “ದ್ರೋಹಕ್ಕೆ ಸಂಭಾವನೆ ಸಾವು” ಎಂದು ಸ್ಟೇಟಸ್ ಹಾಕೆಕೊಂಡಿದ್ದ ಪತಿ!

admincoorgdaily

Photo credit: Times of India

ಕೊಯಮತ್ತೂರು: ಗಾಂಧಿಪುರಂ ಬಳಿ ರಾಜಾ ನಾಯ್ಡು ಬೀದಿಯಲ್ಲಿರುವ ವರ್ಕಿಂಗ್ ವುಮೆನ್ ಹಾಸ್ಟೆಲ್‌ ನಲ್ಲಿ ರವಿವಾರ ಬೆಳಿಗ್ಗೆ ನಡೆದ ಭೀಕರ ಹತ್ಯೆ ಪ್ರಕರಣವು ನಗರವನ್ನು ತಲ್ಲಣಗೊಳಿಸಿದೆ. ಪರಿತ್ಯಕ್ತ ಪತ್ನಿಯನ್ನು ಇರಿದು ಕೊಲೆ ಮಾಡಿ ಬಳಿಕ ಶವದ ಪಕ್ಕ ಕುಳಿತು ಸೆಲ್ಫಿ ತೆಗೆದು “ದ್ರೋಹಕ್ಕೆ ಸಂಭಾವನೆ ಸಾವು” ಎಂದು ವಾಟ್ಸಾಪ್ ಸ್ಟೇಟಸ್ ಹಾಕಿದ ಬಾಲಮುರುಗನ್ (32) ಎಂಬಾತನನ್ನು ರಥಿನಪುರಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ತಿರುವುನಲ್ವೇಲಿ ಮೂಲದ ಪ್ರಿಯಾ (30) ಗಂಡ–ಹೆಂಡತಿ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಮನೆಯಿಂದ ಹೊರಬಂದು ಕೊಯಮತ್ತೂರಿನಲ್ಲಿ ಕ್ರಾಸ್ ಕಟ್ ರಸ್ತೆಯಲ್ಲಿರುವ ಬ್ಯಾಗ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದರು. ಆಕೆ ರಾಜಾ ನಾಯ್ಡು ಬೀದಿಯ ವರ್ಕಿಂಗ್ ವುಮೆನ್ ಹಾಸ್ಟೆಲ್‌ ನಲ್ಲಿ ವಾಸವಾಗಿದ್ದರು.

ಈ ಅವಧಿಯಲ್ಲಿ, ಬಾಲಮುರುಗನ್‌ ನ ದೂರದ ಸಂಬಂಧಿಯಾಗಿರುವ, ಮೂರೂ ಮಕ್ಕಳ ತಂದೆಯಾದ ಇಸಕ್ಕಿ ರಾಜನೊಂದಿಗೆ ಪ್ರಿಯಾ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಬಾಲಮುರುಗನ್ ಶನಿವಾರ ಕೊಯಮತ್ತೂರಿಗೆ ಬಂದು ಪ್ರಿಯಾರನ್ನು ಭೇಟಿಯಾಗಿ, ಇಸಕ್ಕಿ ರಾಜನೊಂದಿಗೆ ಇರುವ ಸಂಪರ್ಕವನ್ನು ಮುರಿದುಕೊಂಡು ತನ್ನ ಜೊತೆ ಮನೆಗೆ ಮರಳುವಂತೆ ಮನವಿ ಮಾಡಿದ್ದ. ಆದರೆ ಪ್ರಿಯಾ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. 

ಇದಾದ ನಂತರ, ಪ್ರಿಯಾ ಹಾಗೂ ಇಸಕ್ಕಿ ರಾಜ ಅವರ ಆತ್ಮೀಯ ಫೋಟೋವೊಂದನ್ನು ರಾಜ, ಬಾಲಮುರುಗನ್‌ಗೆ ಕಳುಹಿಸಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಈ ವಿಷಯದಿಂದ ಆಕ್ರೋಶಗೊಂಡ ಬಾಲಮುರುಗನ್ ರವಿವಾರ ಬೆಳಿಗ್ಗೆ ಕುಡಿದ ಮತ್ತಿನಲ್ಲಿ ಹಾಸ್ಟೆಲ್‌ಗೆ ತೆರಳಿ ಪ್ರಿಯಾರೊಂದಿಗೆ ಜಗಳವಾಡಿದ್ದಾನೆ ಎನ್ನಲಾಗಿದೆ. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದು, ಕೋಪದಲ್ಲಿ ಬಾಲಮುರುಗನ್ ಬ್ಯಾಗ್‌ ನಲ್ಲಿದ್ದ ಕುಡುಗೋಲಿನಿಂದ ಪ್ರಿಯಾಳ ಮೇಲೆ ಹಲವಾರು ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 

ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ ಬಾಲಮುರುಗನ್ ಶವದ ಪಕ್ಕ ಕುಳಿತು ಸೆಲ್ಫಿ ಕ್ಲಿಕ್ಕಿಸಿ ಅದನ್ನು ವಾಟ್ಸಾಪ್ ಸ್ಟೇಟಸ್ ಹಾಕಿದ್ದಾನೆ. ಘಟನೆಯ ಮಾಹಿತಿ ತಿಳಿದ ರಥಿನಪುರಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಿಯಾಳ ಶವವನ್ನು ವಶಪಡಿಸಿಕೊಂಡು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಶವದ ಬಳಿಯೇ ಕುಳಿತಿದ್ದ ಬಾಲಮುರುಗನ್ ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.