ನಾಪೋಕ್ಲು ಮೂರ್ನಾಡು ರಸ್ತೆಯಲ್ಲಿ ಕಾರುಗಳ ನಡುವೆ ಅಪಘಾತ :ಪ್ರಯಾಣಿಕರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ನಾಪೋಕ್ಲು ಮೂರ್ನಾಡು ರಸ್ತೆಯಲ್ಲಿ ಕಾರುಗಳ ನಡುವೆ ಅಪಘಾತ :ಪ್ರಯಾಣಿಕರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ಕಾರುಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯ ಹೊದವಾಡ ಗ್ರಾಮದ ಬೊಳಿಬಾಣೆ ಎಂಬಲ್ಲಿ ನಡೆದಿದೆ.

 ಮರಗೋಡು ಅಭ್ಯತ್ ಮಂಗಲದ ನಿವಾಸಿಗಳು ಪಾಲೂರು ದೇವಾಲಯದಲ್ಲಿ ಕಾರ್ಯಕ್ರಮ ಮುಗಿಸಿ ಮೂರ್ನಾಡು ಮಾರ್ಗವಾಗಿ ಅಭ್ಯತ್ ಮಂಗಲ ಕಡೆಗೆ ಮಾರುತಿ ಸ್ವಿಫ್ಟ್ (KA12Z6919) ಕಾರಿನಲ್ಲಿ ತೆರಳುತ್ತಿರುವ ಸಂದರ್ಭ ಮೂರ್ನಾಡು ಭಾಗದಿಂದ ನಾಪೋಕ್ಲು ಕಡೆಗೆ ಬರುತ್ತಿದ್ದ ಹುಂಡೈ ಐಟೆನ್ (KA12Z6078)ಕಾರಿನ ನಡುವೆ ನಾಪೋಕ್ಲು ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿಬಾಣೆ ಬಳಿಯ ರಸ್ತೆ ತಿರುವಿನಲ್ಲಿ ಮುಖಮುಖಿ ಅಪಘಾತ ಸಂಭವಿಸಿದೆ. ಅಪಘಾತದ ರಬ್ಬಸಕ್ಕೆ ಎರಡು ಕಾರುಗಳು ಜಖಂಗೊಂಡಿದೆ. ಅಪಘಾತದಿಂದ ಹುಂಡೈ ಐಟೆನ್ ಕಾರಿನಲ್ಲಿದ್ದ ಕುಂಜಿಲ ಗ್ರಾಮದ ನಿವಾಸಿಗಳಾದ ಚಿತ್ರಬಾನು, ದಿವ್ಯಹಾಗೂ ಇವರ ಮೊಮ್ಮಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಸಿಫ್ಟ್ ಕಾರಿನಲ್ಲಿ ಪ್ರಿಯಾಣಿಸುತ್ತಿದ್ದ ಅಬ್ಯತ್ ಮಂಗಲದ ನಿವಾಸಿಗಳಾದ ಕೌಶಿಕ್, ಮಲ್ಲಿಗೆ,ತುಷ್ಟಿ ಎಂಬ ಮಗುವಿಗು ಗಾಯಗಳಾಗಿವೆ.ಗಾಯಾಳುವಿಗೆ ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಯಲ್ಲಿ ಹೆಚ್ಚಿನ ಆಂಬುಲೆನ್ಸ್ ವ್ಯವಸ್ಥೆ ಇಲ್ಲದ ಕಾರಣ ಹುಂಡೈ ಐಟೆನ್ ಕಾರಿನಲ್ಲಿದ್ದ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಾಪೋಕ್ಲು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಟಿ.ಎ. ಮೊಹಮ್ಮದ್ ಅನಿಫ್ ಅವರು ತಮ್ಮ ವಾಹನದಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಘಟನಾ ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.