ನಟ ಮೋಹನ್‌ಲಾಲ್ ಅವರ ತಾಯಿ ಶಾಂತಕುಮಾರಿ ನಿಧನ
ಕೊಚ್ಚಿ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಲಯಾಳ ಚಿತ್ರರಂಗದ ಹಿರಿಯ ನಟ ಮೋಹನ್‌ಲಾಲ್ ಅವರ ತಾಯಿ ಶಾಂತಕುಮಾರಿ ಅಮ್ಮ ಅವರು ಮಂಗಳವಾರ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
90 ವರ್ಷ ವಯಸ್ಸಿನ ಶಾಂತಕುಮಾರಿ ಅಮ್ಮ ಅವರು ಕಳೆದ ಕೆಲವು ವರ್ಷಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರು ನಿಧನರಾದ ವೇಳೆ ಮೋಹನ್‌ಲಾಲ್ ಅವರು ಮನೆಯಲ್ಲಿರಲಿಲ್ಲ. ವಿಷಯ ತಿಳಿದ ತಕ್ಷಣವೇ ಅವರು ಮನೆಗೆ ಆಗಮಿಸಿದ್ದಾರೆ.
ಈ ಸುದ್ದಿ ತಿಳಿದ ಬಳಿಕ ನಟ ಮಮ್ಮುಟ್ಟಿ ಸೇರಿದಂತೆ ಮಲಯಾಳ ಚಿತ್ರರಂಗದ ಹಲವು ಕಲಾವಿದರು ಮೋಹನ್‌ಲಾಲ್ ಅವರ ನಿವಾಸಕ್ಕೆ ಭೇಟಿ ನೀಡಿ ಶಾಂತಕುಮಾರಿ ಅಮ್ಮ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ವಿಧಾನಸಭಾ ಸ್ಪೀಕರ್ ಎ.ಎನ್. ಶಂಸೀರ್ ಸೇರಿದಂತೆ ಅನೇಕ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಶಾಂತಕುಮಾರಿ ಅಮ್ಮ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೋಹನ್‌ಲಾಲ್ ಅವರ ತಂದೆ ವಿಶ್ವನಾಥನ್ ನಾಯರ್ ಅವರು ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಶಾಂತಕುಮಾರಿ ಅಮ್ಮ ಅವರ ಅಗಲಿಕೆಯಿಂದ ಮಲಯಾಳ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.