ಮಳೆ ಕೊರತೆ ನಡುವೆಯೂ ಭತ್ತದ ಇಳುವರಿ ಕಾಪಾಡಲು ಸುಧಾರಿತ ಬೇಸಾಯ ಕ್ರಮ ಅಳವಡಿಸಿಕೊಳ್ಳಿ: ರೈತರಿಗೆ ಜಂಟಿ ಕೃಷಿ ನಿರ್ದೇಶಕರ ಸಲಹೆ

Jul 28, 2026 - 19:46
 0  91
ಮಳೆ ಕೊರತೆ ನಡುವೆಯೂ ಭತ್ತದ ಇಳುವರಿ ಕಾಪಾಡಲು ಸುಧಾರಿತ ಬೇಸಾಯ ಕ್ರಮ ಅಳವಡಿಸಿಕೊಳ್ಳಿ: ರೈತರಿಗೆ ಜಂಟಿ ಕೃಷಿ ನಿರ್ದೇಶಕರ ಸಲಹೆ

ಕೂಡಿಗೆ: ಅಕಾಲಿಕ ಮಳೆ ಕೊರತೆ ಹಾಗೂ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ಕೈ ನಾಟಿಗಿಂತ ಮಷಿನ್ ಟ್ರಾನ್ಸ್‌ಪ್ಲಾಂಟಿಂಗ್ ಹಾಗೂ ಸೀಡ್ ಡ್ರಮ್ ನೇರ ಬಿತ್ತನೆ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ವೆಚ್ಚ ಕಡಿಮೆ ಮಾಡಿ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಬಿ.ಎಸ್. ಚಂದ್ರಶೇಖರ್ ರೈತರಿಗೆ ಸಲಹೆ ನೀಡಿದರು.

 ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೊಡಗು ಜಿಲ್ಲೆಯ ರೈತರಿಗಾಗಿ ಆಯೋಜಿಸಿದ್ದ "ಅಕಾಲಿಕ ಮಳೆ ಕೊರತೆ ಹಿನ್ನೆಲೆಯಲ್ಲಿ ಭತ್ತದ ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳು" ಕುರಿತ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಡ್ಯದ ವಿ.ಸಿ. ಫಾರ್ಮ್‌ನ ಕೃಷಿ ವಿಜ್ಞಾನಿ ಡಾ. ಬಸವಲಿಂಗಯ್ಯ ಅವರು, ಈ ಬಾರಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆ ಇರುವುದರಿಂದ ರೈತರು ಸಾಂಪ್ರದಾಯಿಕ ಕೈ ನಾಟಿಯನ್ನು ಅವಲಂಬಿಸದೆ ಮಷಿನ್ ಟ್ರಾನ್ಸ್‌ಪ್ಲಾಂಟಿಂಗ್, ಸೀಡ್ ಡ್ರಮ್ ಮೂಲಕ ನೇರ ಬಿತ್ತನೆ ಸೇರಿದಂತೆ ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಲ್ಪಾವಧಿ ಭತ್ತದ ತಳಿಗಳ ಆಯ್ಕೆ, ಬೀಜೋಪಚಾರ, ಸಸಿ ಮಡಿ ತಯಾರಿಕೆ, ರೋಗ ನಿರ್ವಹಣೆ ಹಾಗೂ ಪ್ರತಿ ಎಕರೆಗೆ ವೆಚ್ಚವನ್ನು ಹೇಗೆ ಕಡಿಮೆ ಮಾಡಬಹುದು ಎಂಬ ಕುರಿತು ಅವರು ವಿವರವಾದ ಮಾಹಿತಿ ನೀಡಿದರು.

ಸುಧಾರಿತ ಬೇಸಾಯ ವಿಧಾನಗಳಿಂದ ಮಳೆ ಕೊರತೆಯ ನಡುವೆಯೂ ಬೆಳೆಯ ಬೆಳವಣಿಗೆ ಉತ್ತಮವಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ಡಾ. ಬಿ.ಎಸ್. ಚಂದ್ರಶೇಖರ್, ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಸಸಿ ಮಡಿ ತಯಾರಿಕೆ ಹಾಗೂ ನಾಟಿ ಕಾರ್ಯಕ್ಕೆ ಬೇಕಾಗುವ ಹೆಚ್ಚಿನ ಕೂಲಿ ಕಾರ್ಮಿಕರ ಅವಲಂಬನೆ ತಪ್ಪಿ, ಕೃಷಿ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ. ಯಾಂತ್ರೀಕೃತ ವಿಧಾನಗಳಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ವಿಸ್ತೀರ್ಣದಲ್ಲಿ ನಾಟಿ ಕಾರ್ಯ ಪೂರ್ಣಗೊಳಿಸಬಹುದಾಗಿದ್ದು, ರೈತರು ಇಂತಹ ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

 ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕ ಡಾ. ಸೋಮಶೇಖರ್, ಕೃಷಿ ಇಲಾಖೆ ಅಧಿಕಾರಿಗಳು, ಕೊಡಗು ಜಿಲ್ಲೆಯ ವಿವಿಧ ತಾಲೂಕಿನ ಪ್ರಗತಿಪರ ರೈತರು, ರೈತ ಮಹಿಳೆಯರು ಹಾಗೂ ಗ್ರಾಮೀಣಾಭಿವೃದ್ಧಿ ಧರ್ಮಸ್ಥಳ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0