State News

ಮುಖ್ಯೋಪಾಧ್ಯಾಯರ ಸ್ವಂತ ವೆಚ್ಚದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ವಿಮಾನ ಪ್ರವಾಸ

admincoorgdaily

Photo credit: TV09

ಕೊಪ್ಪಳ, ಡಿ.27: ಇಲ್ಲಿನ ಬಹದ್ದೂರಬಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಶಾಲೆಯ 24 ವಿದ್ಯಾರ್ಥಿಗಳನ್ನು ವಿಮಾನ ಪ್ರವಾಸಕ್ಕೆ ಕರೆದೊಯ್ದಿದ್ದಾರೆ.

ಜಿಂದಾಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಸದಸ್ಯರು ಹಾಗೂ ಬಿಸಿಯೂಟ ತಯಾರಕರು ಸೇರಿ ಒಟ್ಟು 40 ಮಂದಿ ಈ ವಿಮಾನ ಪ್ರಯಾಣದಲ್ಲಿ ಪಾಲ್ಗೊಂಡಿದ್ದರು.

ವಿಶೇಷ ವಿಮಾನ ವ್ಯವಸ್ಥೆಗೆ ಸುಮಾರು ₹3.50 ಲಕ್ಷ ವೆಚ್ಚವಾಗಿದ್ದು, ಎರಡು ದಿನಗಳ ಊಟ ಹಾಗೂ ವಸತಿ ಸೇರಿ ಒಟ್ಟು ಪ್ರವಾಸ ವೆಚ್ಚವು ಸುಮಾರು ₹5 ಲಕ್ಷವಾಗಲಿದೆ. ಈ ಸಂಪೂರ್ಣ ವೆಚ್ಚವನ್ನು ಯಾವುದೇ ಸರ್ಕಾರಿ ನೆರವಿಲ್ಲದೆ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಅವರೇ ಭರಿಸಿದ್ದಾರೆ ಎಂದು ತಿಳಿದು ಬಂದಿದೆ. 

ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಲ್ಲಿ ಬಹುತೇಕರಿಗೆ ಇದು ಮೊದಲ ವಿಮಾನ ಪ್ರಯಾಣವಾಗಿದ್ದು, ಪ್ರವಾಸವು ಮಕ್ಕಳಿಗೆ ಹೊಸ ಅನುಭವವನ್ನು ನೀಡಿದೆ. 

ಈ ಕ್ರಮಕ್ಕೆ ಪಾಲಕರು ಮತ್ತು ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.