ಮಾಧ್ಯಮ ಸ್ಪಂದನದ ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪರಿಗೆ ಆರ್ಟ್ ಆಫ್ ಲಿವಿಂಗ್‌ನ ಪ್ರತಿಷ್ಠಿತ ‘ತೆರೆಮರೆಯ ಸಾಧಕ’ ಪ್ರಶಸ್ತಿ

Jun 15, 2026 - 18:07
 0  148
ಮಾಧ್ಯಮ ಸ್ಪಂದನದ ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪರಿಗೆ ಆರ್ಟ್ ಆಫ್ ಲಿವಿಂಗ್‌ನ ಪ್ರತಿಷ್ಠಿತ ‘ತೆರೆಮರೆಯ ಸಾಧಕ’ ಪ್ರಶಸ್ತಿ

ಮೈಸೂರು: ಮಾಧ್ಯಮ ಸ್ಪಂದನ ಮೂಲಕ ಸಮಾಜಮುಖಿ ಚಟುವಟಿಕೆ, ಮಾಧ್ಯಮ ಕ್ಷೇತ್ರದ ಮೂಲಕ ಜನಜಾಗೃತಿ ಮತ್ತು ಮಾನವೀಯ ಮೌಲ್ಯಗಳ ಪ್ರಸಾರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ, ಮಾಧ್ಯಮ ಸ್ಪಂದನ ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರತಿಷ್ಠಿತ ‘ತೆರೆಮರೆಯ ಸಾಧಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆ ಹಾಗೂ ಗುರುದೇವ್ ಶ್ರೀ ಶ್ರೀ ರವಿಶಂಕರ ಗುರುಜೀ ಅವರ 70ನೇ ಜನ್ಮದಿನೋತ್ಸವದ ಅಂಗವಾಗಿ ಭಾನುವಾರ ಮೈಸೂರು ಆಶ್ರಮದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ಈ ಗೌರವ ಪ್ರದಾನಿಸಲಾಯಿತು. ಸಂಸ್ಥೆಯ ಸ್ವಾಮೀಜಿಗಳಾದ ಕೌಶಿಕ್ ಸ್ವಾಮೀಜಿ ಮತ್ತು ದಿವ್ಯಪಾದ ಸ್ವಾಮೀಜಿ ಪ್ರಶಸ್ತಿ ನೀಡಿ, ಸನ್ಮಾನಿಸಿದರು.

ಈ ಸಂದರ್ಭ ಮಾತನಾಡಿದ ಕೌಶಿಕ್ ಸ್ವಾಮೀಜಿ, “ಸಮಾಜದ ಒಳಿತಿಗಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುವ ವ್ಯಕ್ತಿಗಳೇ ನಿಜವಾದ ಸಾಧಕರು. ಅಂತಹ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವುದು ಹಾಗೂ ಇತರರಿಗೆ ಪ್ರೇರಣೆಯಾಗಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ. ಗುರುಜೀ ಆಶಯ ಮತ್ತು ಆಶೀರ್ವಾದದೊಂದಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.

ದಿವ್ಯಪಾದ ಸ್ವಾಮೀಜಿ ಮಾತನಾಡಿ, “ಪ್ರತಿಯೊಬ್ಬ ವ್ಯಕ್ತಿಯ ಪ್ರತಿಭೆ ಮತ್ತು ಸಾಮರ್ಥ್ಯ ಸಮಾಜದ ಹಿತಕ್ಕಾಗಿ ಬಳಸಲ್ಪಟ್ಟಾಗ ಅದರ ಮೌಲ್ಯ ಹೆಚ್ಚುತ್ತದೆ. ನಿಸ್ವಾರ್ಥ ಸೇವೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತಿರುವ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಆರ್ಟ್ ಆಫ್ ಲಿವಿಂಗ್ ನಿರಂತರವಾಗಿ ಮಾಡುತ್ತಿದೆ” ಎಂದು ತಿಳಿಸಿದರು.

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಹಿರಿಯ ಶಿಕ್ಷಕರಾದ ಎಸ್.ಆರ್. ವೆಂಕಟೇಶ್ ಮಾತನಾಡಿ, “ಧ್ಯಾನ, ಯೋಗ ಮತ್ತು ಮಾನವೀಯ ಮೌಲ್ಯಗಳ ಮೂಲಕ ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಸಂಸ್ಥೆ ಶ್ರಮಿಸುತ್ತಿದೆ. ಇಂದಿನ ಒತ್ತಡದ ಬದುಕಿನಲ್ಲಿ ಶಾಂತಿ, ಸಮತೋಲನ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಆರ್ಟ್ ಆಫ್ ಲಿವಿಂಗ್ ಮಹತ್ವದ ಪಾತ್ರ ವಹಿಸುತ್ತಿದೆ” ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಂಡಿಚೇರಿ ವೈದ್ಯಕೀಯ ಕಾಲೇಜು ನಿವೃತ್ತ ಡೀನ್ ಡಾ. ಕೆ. ರಾಜಲಕ್ಷ್ಮಿ, ದೇವರತ್ನ ಸಂಸ್ಥೆ ಸಂಸ್ಥಾಪಕ ಎಂ. ಶಿವಪ್ರಸಾದ್ ಪಾಲ್ಗೊಂಡಿದ್ದರು.

ಆರ್ಟ್ ಆಫ್ ಲಿವಿಂಗ್‌ ಸಂಸ್ಥೆ ಪ್ರಮುಖರಾದ ವೀಣಾ, ರವಿಕುಮಾರ್, ಆನಂದ್ ಆಶ್ರಣಿ, ನಾಗ ನಂದಿನಿ, ಅಪೂರ್ವ ಸುರೇಶ್, ಕೊಡಗು ಜಿಲ್ಲೆಯ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಶಿಕ್ಷಕರಾದ ಪೋಡಮಾಡ ಭವಾನಿ ನಾಣಯ್ಯ, ತೀತೀರ ಕಾರ್ಯಪ್ಪ, ಶಾಂತೆಯಂಡ ಮಧು ಮಾಚಯ್ಯ ಮತ್ತಿತರರು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0